Ballari | ಸರ್ಕಾರ–ಜನರ ನಡುವಿನ ನೇರ ಸೇತುವೆ ‘ಪ್ರಜಾಸೇವೆ’: ಅನ್ನಪೂರ್ಣ ತುಕಾರಾಂ

ಸಂಡೂರು/ಬಳ್ಳಾರಿ: ಸರ್ಕಾರದ ಯೋಜನೆಗಳು ಹಾಗೂ ಆಡಳಿತ ವ್ಯವಸ್ಥೆಯನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಜಾಸೇವೆ’ ಕಾರ್ಯಕ್ರಮಕ್ಕೆ ಸಂಡೂರು ವಿಧಾನಸಭಾ ಕ್ಷೇತ್ರದ ವಿಠಲಾಪುರ ಗ್ರಾಮದಲ್ಲಿ ಶನಿವಾರ ಶಾಸಕಿ ಅನ್ನಪೂರ್ಣ ಈ. ತುಕಾರಾಂ ಚಾಲನೆ ನೀಡಿದರು.
ಮುಖ್ಯಮಂತ್ರಿಗಳ ಆಶಯದಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇದರ ಭಾಗವಾಗಿ ವಿಠಲಾಪುರದಲ್ಲಿ ತಾಲೂಕು ಮಟ್ಟದ ಉದ್ಘಾಟನೆ ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಅನ್ನಪೂರ್ಣ ತುಕಾರಾಂ, “ಪ್ರಜಾಸೇವೆ ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ನೇರ ಸೇತುವೆಯಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ನೇರವಾಗಿ ಹೇಳಿಕೊಂಡು ಪರಿಹಾರ ಪಡೆಯಲು ಈ ವೇದಿಕೆ ಸಹಕಾರಿಯಾಗಲಿದೆ” ಎಂದರು.
ಗ್ರಾಮೀಣ ಭಾಗದ ಜನರು, ವಿಶೇಷವಾಗಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದೂರದ ಪ್ರದೇಶಗಳಿಂದ ಬರುವ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಲುಪಿಸಲು ಎದುರಿಸುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಜಾಸೇವೆ ಕಾರ್ಯಕ್ರಮ ರೂಪಿಸಲಾಗಿದೆ. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಪ್ರತಿ ಅರ್ಜಿಗೂ ಜವಾಬ್ದಾರಿ, ಉತ್ತರದಾಯಿತ್ವ :
ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿಗೂ ತಾಲೂಕು ಆಡಳಿತದಲ್ಲಿ ಸೂಕ್ತ ಜವಾಬ್ದಾರಿ ಮತ್ತು ಉತ್ತರದಾಯಿತ್ವವಿದೆ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ಭರವಸೆ ನೀಡಿದರು.
ಸಲ್ಲಿಕೆಯಾಗುವ ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಲಿದ್ದು, ಅವುಗಳ ವಿಲೇವಾರಿ ಪ್ರಗತಿಯನ್ನು ಖುದ್ದು ವೀಕ್ಷಿಸಲಿದ್ದಾರೆ. ಹೀಗಾಗಿ ಪ್ರಜಾಸೇವೆ ಕೇವಲ ನಾಮಕಾವಸ್ಥೆಯ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.
ಕಾನೂನು ವ್ಯಾಪ್ತಿಗೆ ಒಳಪಡುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಲಾಗುವುದು. ಕಾನೂನು ವ್ಯಾಪ್ತಿಗೆ ಬಾರದ ಅರ್ಜಿಗಳಿಗೆ ಸೂಕ್ತ ಹಿಂಬರಹ ನೀಡಿ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿ ಶನಿವಾರ ಜನರ ಬಳಿಗೆ ಆಡಳಿತ :
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಉದ್ದೇಶದಿಂದ ಶಾಸಕರ ನೇತೃತ್ವ ಹಾಗೂ ಉಸ್ತುವಾರಿಯಲ್ಲಿ ಪ್ರತಿ ಶನಿವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ನಡೆಸಲಾಗುವುದು ಎಂದು ತಾಲೂಕು ಆಡಳಿತ ತಿಳಿಸಿದೆ.
ಜನರು ತಮ್ಮ ಸಮಸ್ಯೆಗಳಿಗಾಗಿ ತಾಲೂಕು ಕಚೇರಿಗಳಿಗೆ ಅಲೆದಾಡುವ ಬದಲು, ಆಡಳಿತವೇ ಗ್ರಾಮಗಳತ್ತ ತೆರಳಿ ಅಹವಾಲುಗಳನ್ನು ಆಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಕೆರೆಗೆ ನೀರು ತುಂಬಿಸಿ, ಗುಳೆ ತಪ್ಪಿಸಿ: ರೈತರ ಮನವಿ
ವಿಠಲಾಪುರ ಭಾಗದ ರೈತರು ಕೆರೆಗಳಿಗೆ ನೀರು ತುಂಬಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.
ಬಹಳ ವರ್ಷಗಳಿಂದ ಕೆರೆ ತುಂಬಿಸುವ ಯೋಜನೆಗಾಗಿ ಮನವಿ ಮಾಡುತ್ತಿದ್ದೇವೆ. ಮಳೆಯ ಅಭಾವದಿಂದ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು, ಗ್ರಾಮೀಣ ಜನರು ಉದ್ಯೋಗ ಅರಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಗಳಿಗೆ ನೀರು ತುಂಬಿಸಿದರೆ ರೈತರ ಬದುಕಿಗೆ ಆಸರೆಯಾಗುವುದರ ಜೊತೆಗೆ ಗುಳೆ ಹೋಗುವುದನ್ನು ತಡೆಯಬಹುದು ಎಂದು ರೈತರು ಮನವಿ ಮಾಡಿದರು.
ಶಿಕ್ಷಣಕ್ಕೂ ಡಿಜಿಟಲ್ ಸ್ಪರ್ಶ :
ತಾಲೂಕಿನ ಗಡಿಭಾಗದ ಶಾಲೆಗಳಿಗೂ ಗುಣಮಟ್ಟದ ಶಿಕ್ಷಣ ತಲುಪಿಸುವ ಉದ್ದೇಶದಿಂದ ಎನ್‌ಎಂಡಿಸಿ ಸಹಯೋಗದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ‘ಟ್ಯಾಪ್ ಸಂಡೂರು’ ಡಿಜಿಟಲ್ ಸ್ಟುಡಿಯೋ ಆರಂಭಿಸಿರುವುದಾಗಿ ಶಾಸಕಿ ಅನ್ನಪೂರ್ಣ ತುಕಾರಾಂ ತಿಳಿಸಿದರು.
ಶಿಕ್ಷಕರ ಕೊರತೆ ಇರುವ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಗುಣಮಟ್ಟದ ಪಾಠ ಬೋಧನೆ ಒದಗಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡುಗಿನ ಬಸಪ್ಪ, ರಾಜ್ಯ ಖನಿಜ ಇಲಾಖೆ ಉಪಾಧ್ಯಕ್ಷ ಹೆಚ್. ಲಕ್ಷ್ಮಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ನಾಗರಾಜ, ಬಿಇಒ ಡಾ. ಐ.ಆರ್. ಅಕ್ಕಿ, ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಗ್ಯಾರಂಟಿ ಅಧ್ಯಕ್ಷ ನೂರುದ್ದೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






