Ballari | ವೇಶ್ಯಾವಾಟಿಕೆ ಆರೋಪ : ಹಲವರ ಬಂಧನ, ಮಹಿಳೆಯರ ರಕ್ಷಣೆ

ಸಾಂದರ್ಭಿಕ ಚಿತ್ರ | AI
ಬಳ್ಳಾರಿ : ಬಳ್ಳಾರಿ ನಗರದಲ್ಲಿ ವೇಶ್ಯಾವಾಟಿಕೆ ಹಾಗೂ ಲೈಂಗಿಕ ಚಟುವಟಿಕೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ, ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿಗಳಲ್ಲಿ ಆರೋಪಿಗಳನ್ನು ಬಂಧಿಸಿ, ಮಹಿಳೆಯರನ್ನು ರಕ್ಷಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರ ಮಾರ್ಗದರ್ಶನದಲ್ಲಿ Gಗಾಂಧಿನಗರ, ಎಪಿಎಂಸಿ ಹಾಗೂ ಕೌಲ್ ಬಜಾರ್ ಪೊಲೀಸ್ ಠಾಣೆಗಳ ತಂಡಗಳು ಶೋಧನಾ ವಾರಂಟ್ ಆಧಾರದಲ್ಲಿ ದಾಳಿ ನಡೆಸಿವೆ.
ಗಾಂಧಿನಗರ ಠಾಣೆಯಲ್ಲಿ ಎರಡು ಪ್ರಕರಣ :
ಗಾಂಧಿನಗರ ಠಾಣೆ ವ್ಯಾಪ್ತಿಯ ಸೊಂತ ಅಂಗಣ್ಣ ಕಾಲೋನಿಯ ತಿರುಮಲ ಆಸ್ಪತ್ರೆ ಮುಂಭಾಗದ ಮನೆಯಲ್ಲಿ ಮೇ 17ರಂದು ದಾಳಿ ನಡೆಸಿ ಒಬ್ಬ ಮಹಿಳೆಯನ್ನು ರಕ್ಷಿಸಿ ಸ್ತ್ರೀ ಸೇವಾನಿಕೇತನ ಕೇಂದ್ರಕ್ಕೆ ಒಪ್ಪಿಸಲಾಗಿದೆ.
ಈ ಸಂಬಂಧ ಅಪರಾಧ ಸಂಖ್ಯೆ 78/2026 ದಾಖಲಾಗಿದ್ದು, ದೇವಿಪ್ರಸನ್ನ ಹಾಗೂ ಜಿಲ್ಲಾ ಸೂರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಮಹಿಳೆಗೆ ಹಣದ ಆಮಿಷ ಒಡ್ಡಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಇನ್ನೊಂದು ಪ್ರಕರಣದಲ್ಲಿ ಆನಂತಪುರ ರಸ್ತೆಯ ವೆಂಕಟೇಶ್ವರ ನಗರ ಸಮೀಪದ ನೀಲಕಂಠೇಶ್ವರ ನಿಲಯದಲ್ಲಿ ಮೇ 20ರಂದು ದಾಳಿ ನಡೆಸಿ ಮತ್ತೊಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ. ಈ ಪ್ರಕರಣದಲ್ಲಿ ಎಸ್. ಶಹಜಾವಿ (46) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಬೆಂಗಳೂರಿನ ಮೂಲದ ಮಹಿಳೆಯನ್ನು ಅಕ್ರಮ ಚಟುವಟಿಕೆಗೆ ಬಳಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಅಪರಾಧ ಸಂಖ್ಯೆ 82/2026 ದಾಖಲಾಗಿದೆ.
ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ರಕ್ಷಣೆ :
ಎಪಿಎಂಸಿ ಠಾಣೆ ವ್ಯಾಪ್ತಿಯ ಅಗಡಿ ಮಾರಪ್ಪ ಕಾಂಪೌಂಡ್ 2ನೇ ಸ್ಟೇಜ್ನ ಕೆಎಂಎಸ್ ಶಕುಂತಲಮ್ಮ ನಿಲಯಂ ಎಂಬ ಮನೆಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಿ ಸ್ತ್ರೀಸೇವಾನಿಕೇತನ ಕೇಂದ್ರಕ್ಕೆ ಒಪ್ಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ (48) ಹಾಗೂ ಉಷಾ (27) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮತ್ತೊಬ್ಬ ಆರೋಪಿತೆ ಶಾಂತಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಸಂಬಂಧ ಅಪರಾಧ ಸಂಖ್ಯೆ 118/2026 ದಾಖಲಾಗಿದೆ.
ಕೌಲ್ ಬಜಾರ್ ಠಾಣೆಯಲ್ಲಿ ಇಬ್ಬರ ವಶ :
ಕೌಲ್ ಬಜಾರ್ ಠಾಣಾ ವ್ಯಾಪ್ತಿಯ ರಸ್ತೆ ಬಂಡಿಹಳ್ಳಿ ಸರ್ಕಲ್ ಸಮೀಪದ ವೆಂಕಟೇಶ್ವರ ಕಾಂಪ್ಲೆಕ್ಸ್ ಹಿಂಭಾಗದ ಮನೆಯಲ್ಲಿ ದಾಳಿ ನಡೆಸಿದ ವೇಳೆ ನೊಂದ ಮಹಿಳೆ ಪತ್ತೆಯಾಗದಿದ್ದರೂ, ಪೈರೋಜ್ (28) ಹಾಗೂ ಅಬ್ದುಲ್ ಖದೀರ್ (25) ಎಂಬ ಇಬ್ಬರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 116/2026 ದಾಖಲಾಗಿದ್ದು, ತನಿಖೆ ಮುಂದುವರೆದಿದೆ.






