ಬಳ್ಳಾರಿ | ಕೇಂದ್ರ ಪುರಸ್ಕೃತ ಯೋಜನೆಗಳ ಜಾಗೃತಿ ಅಭಿಯಾನ ಅಂಗವಾಗಿ ರಂಗೋಲಿ ಸ್ಪರ್ಧೆ

ಬಳ್ಳಾರಿ : ವಿಕಸಿತ ಭಾರತ ಜಿ ರಾಮ್ ಜಿ – ವಂದೇ ಮಾತರಂ ರಾಷ್ಟ್ರಗೀತೆಯ 150ನೇ ವರ್ಷಾಚರಣೆ, ಕೇಂದ್ರ ಪುರಸ್ಕೃತ ಯೋಜನೆಗಳ ಜಾಗೃತಿ ಅಭಿಯಾನ ಹಾಗೂ ವಸ್ತು ಪ್ರದರ್ಶನದ ಅಂಗವಾಗಿ ನಗರದ ಜಿಲ್ಲಾ ಪಂಚಾಯತ್‌ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಮಹಿಳೆಯರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸಿರುವ ಪೋಷಣ್ ಅಭಿಯಾನ, ಬೇಟಿ ಬಚಾವೋ–ಬೇಟಿ ಪಡಾವೋ, ಮಾತೃವಂದನಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಂಗೋಲಿ ಸ್ಪರ್ಧೆ ನಡೆಸಲಾಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಮಹಿಳೆಯರು ದವಸ ಧಾನ್ಯ, ಹೂವುಗಳು ಹಾಗೂ ರಂಗೋಲಿಯ ವಿವಿಧ ಬಣ್ಣಗಳನ್ನು ಬಳಸಿ ಆಕರ್ಷಕ ಚಿತ್ರಣಗಳ ಮೂಲಕ ರಂಗೋಲಿ ಹಾಕಿ ಗಮನ ಸೆಳೆದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಅವರು, ವಿಕಸಿತ ಭಾರತದ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಭಿನ್ನ ಕಾರ್ಯಕ್ರಮಗಳ ಮೂಲಕ ಫಲಾನುಭವಿಗಳಿಗೆ ಇನ್ನಷ್ಟು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮಹೇಶ್ವರಿ ಮಾತನಾಡಿ, ರಂಗೋಲಿ ಸ್ಪರ್ಧೆಯ ಮೂಲಕ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಲಾಗಿದ್ದು, ಜ.09 ರಂದು ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಝರೀನಾ ಬೇಗಂ ಮಾತನಾಡಿ, ವಿವಿಧ ಬಣ್ಣಗಳು, ಹೂವುಗಳು ಹಾಗೂ ಹಣ್ಣುಗಳ ಮೂಲಕ ಚಿತ್ರ ಬಿಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜ.9 ರಂದು ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಮಾಧ್ಯಮ ಪ್ರತಿನಿಧಿಗಳಿಗಾಗಿ ‘ವಾರ್ತಾಲಾಪ’ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಜೊತೆಗೆ ಮೂರು ದಿನಗಳ ವಸ್ತು ಪ್ರದರ್ಶನವೂ ನಡೆಯಲಿದೆ ಎಂದು ತಿಳಿಸಲಾಯಿತು.







