Ballari | ಪಡಿತರ ಅಕ್ಕಿ ವಾಹನ ತಡೆದು 3 ಲಕ್ಷ ರೂ. ಸುಲಿಗೆ ಆರೋಪ: ಎಸ್ಪಿ ಗನ್ಮ್ಯಾನ್ ಸೇರಿ ಇಬ್ಬರ ಬಂಧನ

ದೇವರಾಜ್, ಸಾಯಿ ರಾಮ್
ಬಳ್ಳಾರಿ : ಪಡಿತರ ಅಕ್ಕಿ ಸಾಗಾಣೆ ವಾಹನವನ್ನು ತಡೆದು ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಎಸ್ಪಿ ಗನ್ಮ್ಯಾನ್ ಸೇರಿ ಇಬ್ಬರನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಎ.28ರಂದು ಬೆಳಗಿನ ಜಾವ 3.30ರಿಂದ 5.30ರ ನಡುವೆ ಮೋಕಾ ಅರಣ್ಯ ಪ್ರದೇಶದ ಸಮೀಪ ಶರಬಯ್ಯ ಅವರಿಗೆ ಸೇರಿದ ಪಡಿತರ ಅಕ್ಕಿ ಸಾಗಾಣೆ ವಾಹನವನ್ನು ತಡೆದು, ದೇವರಾಜ್ ಎಪಿಸಿ-87 ಹಾಗೂ ಸಾಯಿ ರಾಮ್ ಎಂಬುವವರು ಬೆದರಿಕೆ ಹಾಕಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ 3 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮೇ 6ರಂದು ಮೋಕಾ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 53/2026ರಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೇ 7ರಂದು ಆರೋಪಿಗಳಾದ ದೇವರಾಜ್ ಹಾಗೂ ಎಸ್ಪಿ ಗನ್ಮ್ಯಾನ್ ಸಾಯಿ ರಾಮ್ ಅವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಲಿಗೆ ಮಾಡಿದ ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ದೇವರಾಜ್ ಎಸ್ಪಿ ಗನ್ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಸ್ಪಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿತರ ಪತ್ತೆಗಾಗಿ ತನಿಖೆ ಮುಂದುವರಿದಿದೆ.






