Ballari | ಜೋಳ ಖರೀದಿ ಹಣ ತಕ್ಷಣ ಬಿಡುಗಡೆ ಮಾಡಿ : ರೈತ ಸಂಘ ಆಗ್ರಹ

ಬಳ್ಳಾರಿ/ಕಂಪ್ಲಿ: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳವನ್ನು ಸರ್ಕಾರ ಖರೀದಿಸಿ ನಾಲ್ಕು ತಿಂಗಳು ಕಳೆದರೂ ಬಹುತೇಕ ರೈತರಿಗೆ ಹಣ ಪಾವತಿಯಾಗಿಲ್ಲ. ಆದ್ದರಿಂದ ಖರೀದಿಸಿದ ಜೋಳದ ಬಾಕಿ ಹಣವನ್ನು ತಕ್ಷಣ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಎಂ.ಕೆ. ಅವರನ್ನು ಭೇಟಿ ಮಾಡಿದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಈ ಕುರಿತು ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಜೋಳವನ್ನು ರೈತರಿಂದ ಖರೀದಿಸಿ ನಾಲ್ಕು ತಿಂಗಳು ಕಳೆದಿದೆ. ಕೆಲ ರೈತರಿಗೆ ಮಾತ್ರ ಹಣ ಪಾವತಿಯಾಗಿದ್ದು, ಇನ್ನೂ ಶೇ.75ರಷ್ಟು ರೈತರಿಗೆ ಬಾಕಿ ಹಣ ಬಿಡುಗಡೆಯಾಗಿಲ್ಲ. ರೈತರು ಜನವರಿಯಲ್ಲಿ ಜೋಳ ಕೊಯ್ಲು ಮಾಡಿ, ಹಲವು ಬಾರಿ ಅಲೆದಾಡಿದ ಬಳಿಕ ಸರ್ಕಾರ ಖರೀದಿಸಿದರೂ ಇದುವರೆಗೆ ಹಣ ಸಿಗದಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ ಎಂದು ಹೇಳಿದರು.
ಕಳೆದ ವರ್ಷ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರು, ಈ ಬಾರಿ ಸಾಲ ಮಾಡಿ ಬಿತ್ತನೆ ನಡೆಸಿದ್ದಾರೆ. ಆದರೆ ಮಳೆ ಕೊರತೆಯಿಂದ ಬೆಳೆಗಳು ಒಣಗಿ ಹೋಗಿದ್ದು ಮತ್ತಷ್ಟು ಸಂಕಷ್ಟ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಖರೀದಿಸಿದ ಜೋಳದ ಹಣವನ್ನೂ ವಿಳಂಬ ಮಾಡುತ್ತಿರುವುದು ರೈತರ ಮೇಲೆ ಹೆಚ್ಚುವರಿ ಹೊರೆ ಉಂಟುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಹಿತದೃಷ್ಟಿಯಿಂದ ಜೋಳ ಖರೀದಿಯ ಬಾಕಿ ಹಣವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಣಗೌಡ ಪಾಟೀಲ್, ಬಸವರಾಜ ಗೋಡಿಹಾಳ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.






