Ballari | ಘನ ತ್ಯಾಜ್ಯ ನಿರ್ವಹಣಾ ಕಾರ್ಯಗಳ ಪ್ರಗತಿ ಪರಿಶೀಲನೆ: ವೈಜ್ಞಾನಿಕ ವಿಲೇವಾರಿಗೆ ಇಒ ಮಡಗಿನ ಬಸಪ್ಪ ಸೂಚನೆ

ಸಂಡೂರು/ಬಳ್ಳಾರಿ: ತಾಲೂಕಿನ ವಡ್ಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಜೆಎಸ್‌ಡಬ್ಲ್ಯು ಸಾಹಸ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಘನ ತ್ಯಾಜ್ಯ ನಿರ್ವಹಣಾ (SWM) ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ವಡ್ಡು, ತೋರಣಗಲ್, ತಾಳೂರು, ಬನ್ನಿಹಟ್ಟಿ ಹಾಗೂ ತಾರಾನಗರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಘನ ತ್ಯಾಜ್ಯ ನಿರ್ವಹಣಾ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದ ಇಒ ಮಡಗಿನ ಬಸಪ್ಪ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ, ವಿಂಗಡಿಸಿ, ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.
ಘನ ತ್ಯಾಜ್ಯ ನಿರ್ವಹಣಾ ವಾಹನಗಳ ವಿಮೆಯನ್ನು ನಿಗದಿತ ಅವಧಿಯೊಳಗೆ ನವೀಕರಿಸಬೇಕು. ಸ್ವಚ್ಛತಾ ಸೇವಾ ಶುಲ್ಕವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಬೇಕು. ಸ್ವಚ್ಛತಾ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸುವುದರ ಜತೆಗೆ ಬಾಕಿ ಇರುವ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ತೆರಿಗೆ ವಸೂಲಿಗಾರರು, ಘನ ತ್ಯಾಜ್ಯ ನಿರ್ವಹಣಾ ಸಿಬ್ಬಂದಿ ಹಾಗೂ ಜಿಪಿಎಲ್‌ಎಫ್ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ ತೆರಿಗೆ ವಸೂಲಾತಿಗೆ ಆದ್ಯತೆ ನೀಡಬೇಕು. ತ್ಯಾಜ್ಯ ಮಾರಾಟದಿಂದ ಬರುವ ಆದಾಯವನ್ನು ಇತರ ಚಟುವಟಿಕೆಗಳಿಗೆ ಬಳಸದೆ, ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಸೂಚಿಸಿದರು.
2026ರ ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ, ಉತ್ತಮವಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಸ್ಥಳಗಳಿಗೆ ಅಧ್ಯಯನ ಪ್ರವಾಸ ಆಯೋಜಿಸಿ, ಅಲ್ಲಿನ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಈ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಹಸ ಸಂಸ್ಥೆಗೆ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಆಡಳಿತಾಧಿಕಾರಿಗಳಾದ ಸಿಡಿಪಿಒ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್, ಸಾಮಾಜಿಕ ಅರಣ್ಯ ಇಲಾಖೆಯ ಆರ್‌ಎಫ್‌ಒ ಮಾಭಾಷಾ, ಎಸ್‌ಡಬ್ಲ್ಯುಎಂ ಜಿಲ್ಲಾ ಸಂಯೋಜಕ ಮರಿಸ್ವಾಮಿ, ಸಾಹಸ ಸಂಸ್ಥೆಯ ಸಂಯೋಜಕ ಮಂಜುನಾಥ್, ಟಿಪಿಎಂ ಸೋಮಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗುರುಪ್ರಸಾದ್, ಸದಾಶಿವಪ್ಪ ತಗ್ಗಿ, ಹನುಮಂತಪ್ಪ ಮಾಗಿ ಹಾಗೂ ಜುಬೇರ್, ಪಂಚಾಯಿತಿ ಕಾರ್ಯದರ್ಶಿ ರುದ್ರಯ್ಯ ಸ್ವಾಮಿ ಸೇರಿದಂತೆ ಪಂಚಾಯಿತಿ ಸಿಬ್ಬಂದಿ, ಗ್ರಾಮ ಪಂಚಾಯಿತಿ ಒಕ್ಕೂಟಗಳ ಅಧ್ಯಕ್ಷರು, ಎಂಬಿಕೆ, ಎಲ್‌ಸಿಆರ್‌ಪಿ, ಘನ ತ್ಯಾಜ್ಯ ನಿರ್ವಹಣಾ ಸಿಬ್ಬಂದಿ, ವಾಹನ ಚಾಲಕಿಯರು, ಸಹಾಯಕರು ಹಾಗೂ ಸಾಹಸ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.






