Ballari | ʼಹೆಲ್ಮೆಟ್ ಕಡ್ಡಾಯʼ ಜಾಗೃತಿ ಅಭಿಯಾನಕ್ಕೆ ಸಂಡೂರು ಪೊಲೀಸರಿಂದ ಚಾಲನೆ

ಸಂಡೂರು/ಬಳ್ಳಾರಿ: ರಸ್ತೆ ಅಪಘಾತಗಳಿಂದ ಉಂಟಾಗುತ್ತಿರುವ ಪ್ರಾಣಹಾನಿ ತಡೆಗಟ್ಟುವ ಹಾಗೂ ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಂಡೂರು ಪೊಲೀಸ್ ಠಾಣೆಯ ವತಿಯಿಂದ ಬುಧವಾರ ಹೆಲ್ಮೆಟ್ ಕಡ್ಡಾಯ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಈ ಜಾಗೃತಿ ಅಭಿಯಾನಕ್ಕೆ ಮಹೇಶ್ ಗೌಡ ಚಾಲನೆ ನೀಡಿದರು. ಡಾಕೇಶ್ ಯು ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಸಂಚಾರ ನಡೆಸಿ ಸಾರ್ವಜನಿಕರಲ್ಲಿ ಸಂಚಾರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು.
ಅಭಿಯಾನದ ವೇಳೆ ಎಲ್ಲಾ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೈಕ್‌ಗಳಲ್ಲಿ ಸಂಚರಿಸುವ ಮೂಲಕ “ಮೊದಲು ನಾವು ಪಾಲಿಸೋಣ, ನಂತರ ಸಾರ್ವಜನಿಕರಿಗೆ ತಿಳಿಸೋಣ” ಎಂಬ ಸಂದೇಶ ಸಾರಿದರು.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂದರ್ಭಗಳಲ್ಲಿ ಜೀವ ರಕ್ಷಣೆ ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಮಹೇಶ್ ಗೌಡ, “ಹೆಲ್ಮೆಟ್ ಕೇವಲ ದಂಡ ತಪ್ಪಿಸಿಕೊಳ್ಳಲು ಧರಿಸುವ ವಸ್ತುವಲ್ಲ, ಅದು ಜೀವ ರಕ್ಷಕ ಕವಚ. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರೂ ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು” ಎಂದು ಹೇಳಿದರು.
ಡಾಕೇಶ್ ಯು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ. ವಾಹನ ಸವಾರರು ವೇಗ ನಿಯಂತ್ರಣ, ಟ್ರಾಫಿಕ್ ನಿಯಮ ಪಾಲನೆ ಹಾಗೂ ಹೆಲ್ಮೆಟ್ ಬಳಕೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಪಟ್ಟಣದ ವಿವಿಧ ವೃತ್ತಗಳು, ಮುಖ್ಯರಸ್ತೆಗಳು ಹಾಗೂ ವ್ಯಾಪಾರ ಪ್ರದೇಶಗಳಲ್ಲಿ ನಡೆದ ಜಾಗೃತಿ ಮೆರವಣಿಗೆಯಲ್ಲಿ ಪೊಲೀಸ್ ಸಿಬ್ಬಂದಿ ಕರಪತ್ರ ವಿತರಿಸಿ ಸುರಕ್ಷಿತ ಸಂಚಾರದ ಮಹತ್ವವನ್ನು ವಿವರಿಸಿದರು. ಸಾರ್ವಜನಿಕರು ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.






