Ballari | ಆರು ದಿನಗಳ ವಿಶೇಷ ಕೌಶಲ್ಯಾಧಾರಿತ ಕಾರ್ಯಾಗಾರಗಳಿಗೆ ಚಾಲನೆ

ಸಂಡೂರು/ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿಯ ಸಮಾಜ ಕಾರ್ಯ ಅಧ್ಯಯನ ವಿಭಾಗದ ವತಿಯಿಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಆಯೋಜಿಸಲಾದ ಆರು ದಿನಗಳ ವಿಶೇಷ ಕೌಶಲ್ಯಾಧಾರಿತ ಸರಣಿ ಕಾರ್ಯಾಗಾರಗಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕರಾದ ಡಾ. ಚೌಡಪ್ಪ ವಿ. ಉದ್ಘಾಟಿಸಿದರು. ಸಮಾಜ ಕಾರ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಸುಮ ಕೆ.ಜಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಯೋಜಕರಾದ ಶ್ರೀ ಲಕ್ಷ್ಮಣ ತೋಳಿ, ಉಪನ್ಯಾಸಕರಾದ ಡಾ. ಹನುಮಂತಪ್ಪ ಜಿ. ಹಾಗೂ ಡಾ. ಹೊನ್ನೂರಪ್ಪ ಎಸ್. ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಯೋಜಕ ಲಕ್ಷ್ಮಣ ತೋಳಿ, ಜೂನ್ 15ರಿಂದ 20ರವರೆಗೆ ನಡೆಯುವ ಕಾರ್ಯಾಗಾರಗಳಲ್ಲಿ ಸಂದರ್ಶನ ಕೌಶಲ್ಯ, ರೆಸ್ಯೂಮ್ ತಯಾರಿಕೆ, ಸಂವಹನ ಕೌಶಲ್ಯ, ತಂಡ ಕಾರ್ಯನಿರ್ವಹಣೆ, AI ಬಳಕೆ, ಡಿಜಿಟಲ್ ಕೌಶಲ್ಯಗಳು, ಗುಂಪು ಚರ್ಚೆ, ಸಮಯ ನಿರ್ವಹಣೆ, ಮೈಂಡ್ ಮ್ಯಾಪಿಂಗ್, ಅಡ್ವಾನ್ಸ್ಡ್ ಎಕ್ಸೆಲ್, ಪವರ್ ಬಿಐ ಹಾಗೂ NGO ನಿರ್ವಹಣೆ ಸೇರಿದಂತೆ 25ಕ್ಕೂ ಹೆಚ್ಚು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಉದ್ಘಾಟನಾ ಭಾಷಣದಲ್ಲಿ ಡಾ. ಚೌಡಪ್ಪ ವಿ. ಅವರು ಸೈದ್ಧಾಂತಿಕ ಶಿಕ್ಷಣದ ಜೊತೆಗೆ ಪ್ರಾಯೋಗಿಕ ಕೌಶಲ್ಯಗಳ ಅಗತ್ಯವನ್ನು ಒತ್ತಿಹೇಳಿದರು. ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳನ್ನು ಉದ್ಯೋಗ ಕ್ಷೇತ್ರಕ್ಕೆ ಸಜ್ಜುಗೊಳಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಡಾ. ಸುಮ ಕೆ.ಜಿ. ಅವರು ಸಮಾಜ ಕಾರ್ಯ ಪದವೀಧರರಿಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗಾವಕಾಶಗಳಿವೆ ಎಂದು ವಿವರಿಸಿದರು. ವಿದ್ಯಾರ್ಥಿಗಳ ವೃತ್ತಿ ಬೆಳವಣಿಗೆಗೆ ಪೂರಕವಾಗಿ ನಿರಂತರವಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.






