ಬಳ್ಳಾರಿ | ಛಾಯಾಗ್ರಾಹಕರ ಕುಟುಂಬಗಳ ಉತ್ತಮ ಜೀವನಕ್ಕೆ ಸರಕಾರ ವಿಶೇಷ ಯೋಜನೆ ರೂಪಿಸಲಿ: ವಾಮದೇವ ಶ್ರೀ

ಬಳ್ಳಾರಿ / ಕಂಪ್ಲಿ : ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಛಾಯಾಗ್ರಾಹಕರ ಜೀವನ ಅತ್ಯಂತ ಸಂಕಷ್ಟದಲ್ಲಿದ್ದು, ಛಾಯಾಗ್ರಾಹಕರ ಹಾಗೂ ಅವರ ಕುಟುಂಬಗಳ ಉತ್ತಮ ಜೀವನಕ್ಕಾಗಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು ಎಂದು ಎಮ್ಮಿಗನೂರು ಹಂಪಿ ಸಾವಿರ ದೇವರು ಮಹಾಂತರ ಮಠದ ಪೀಠಾಧಿಪತಿಗಳಾದ ಷ.ಬ್ರ. ವಾಮದೇವ ಮಹಾಂತ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ವೀಶೈಭವನದಲ್ಲಿ ಕಂಪ್ಲಿ ತಾಲ್ಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ಸಂಘ ಏರ್ಪಡಿಸಿದ್ದ ತಾಲ್ಲೂಕು ಛಾಯಾ ಸಮ್ಮಿಲನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಹಳೆಯ ಛಾಯಾಗ್ರಾಹಕರು ಜೀವನ ಸಾಗಿಸುವುದು ತುಂಬಾ ಕಷ್ಟಕರವಾಗಿದೆ. ಆದರೂ ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದುವರಿಯುವುದು ಛಾಯಾಗ್ರಾಹಕರ ಕರ್ತವ್ಯ ಎಂದು ಹೇಳಿದರು.
ಸಮಾರಂಭವನ್ನು ಶಾಸಕರ ಪರವಾಗಿ ಉದ್ಘಾಟಿಸಿದ ರಾಜೇಶ್ ಸಿಂಗ್ ಮಾತನಾಡಿ, ಕಂಪ್ಲಿ ಶಾಸಕರು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಛಾಯಾಗ್ರಾಹಕರ ಪರವಾಗಿ ಶ್ರಮಿಸಿದ್ದಾರೆ. ಮುಂದೆಯೂ ಛಾಯಾಗ್ರಾಹಕರ ನೆರವಿಗೆ ಸದಾ ಸಿದ್ಧರಿದ್ದಾರೆ ಎಂದು ತಿಳಿಸಿ, ಶಾಸಕರಿಂದ ಸಂಘಕ್ಕೆ ನೀಡಲಾದ 50,000 ರೂ. ದೇಣಿಗೆಯನ್ನು ಹಸ್ತಾಂತರಿಸಿದರು.
ಕೆಎಪಿಸಿಎಂಎಸ್ ಅಧ್ಯಕ್ಷ ಹೊಸಕೇಟೆ ಜಗದೀಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಂಪ್ಲಿ ಪಿಐ ಕೆ.ಬಿ. ವಾಸುಕುಮಾರ, ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ನಾಡಗೌಡ ಚಂದ್ರಮೋಹನ್, ವಿಶೇಷ ಆಹ್ವಾನಿತರಾಗಿ ಜಿ. ವೀರಭದ್ರಪ್ಪ ಮತ್ತು ಕುಟುಂಬ, ಆನಂದ ಕಾಗಲ್ಕರ್, ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳ ಛಾಯಾಗ್ರಾಹಕ ಮುಖಂಡರಾದ ಶ್ರೀಧರ್, ನಾಗರಾಜ್, ವಿನಯ್, ಮಲ್ಲಿಕಾರ್ಜುನಗೌಡ, ಷಡಾಕ್ಷರಯ್ಯ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಜಗದೀಶಗೌಡ, ಜಿ. ಸಿದ್ದರಾಮನಗೌಡ, ರಾಘವೇಂದ್ರಶೆಟ್ಟಿ, ಜಿ.ಎಚ್. ಶಶೀಧರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಛಾಯಾಗ್ರಾಹಕರ ಸಮ್ಮಿಲನದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಾಯಿತು.
ಕಾರ್ಯಕ್ರಮವನ್ನು ಅತಿಥಿ ಶಿಕ್ಷಕ ಎಸ್. ರಾಮು ನಿರ್ವಹಿಸಿದರು. ಕಾರ್ಯದರ್ಶಿ ಜಿ.ಎಚ್. ಶಶೀಧರ್ ವರದಿ ಮಂಡಿಸಿದರು. ನಂತರ ಛಾಯಾಗ್ರಾಹಕರ ಕುಟುಂಬದ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.







