Ballari | ನ.17ರಂದು ನೂತನ ಉದ್ಯಮಿಗಳಿಗೆ ವಿಶೇಷ ತರಬೇತಿ, ಜಾಗೃತಿ ಕಾರ್ಯಾಗಾರ

ಬಳ್ಳಾರಿ: ನೂತನ ಉದ್ಯಮಿಗಳಿಗೆ ವಿಶೇಷ ಪ್ರಾಯೋಗಿಕ ತರಬೇತಿ ಹಾಗೂ ಜಾಗೃತಿ ಕಾರ್ಯಾಗಾರವನ್ನು ನವೆಂಬರ್ 17ರಂದು ನಗರದ ಗಾಂಧಿನಗರದ ಮೋಕಾ ರಸ್ತೆಯಲ್ಲಿರುವ ನಕ್ಷತ್ರ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜ್ಯ ವಾಣಿಜ್ಯ ಕೈಗಾರಿಕೋದ್ಯಮಿಗಳ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಮೀಸಲಿಟ್ಟಿರುವ ಶೇ.4ರಷ್ಟು ಮೀಸಲಾತಿಯ ಸೌಲಭ್ಯಗಳು ಹಾಗೂ ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಕುರಿತು ಅನುಭವಿ ತಜ್ಞರಿಂದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಡಿಜಿಟಲ್ ಮಾರ್ಕೆಟಿಂಗ್, ಟ್ವಿಟರ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಹಾಗೂ ಜೆಮ್ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳುವ ವಿಧಾನ ಮತ್ತು ಅದರ ಪ್ರಯೋಜನಗಳ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗುವುದು. ಆಸಕ್ತ ಯುವ ಪುರುಷ ಮತ್ತು ಮಹಿಳಾ ಉದ್ಯಮಿಗಳಿಗೆ ಒಂದೇ ವೇದಿಕೆಯಲ್ಲಿ ವಿವಿಧ ಕೈಗಾರಿಕಾ ಪ್ರಕಾರಗಳು ಹಾಗೂ ಹಣಕಾಸಿನ ನೆರವಿನ ಕುರಿತು ಮಾಹಿತಿ ನೀಡುವುದರ ಜತೆಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಬಳ್ಳಾರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಆಸಕ್ತ ಉದ್ಯಮಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ವಾಣಿಜ್ಯ ಕೈಗಾರಿಕೋದ್ಯಮಿಗಳ ಅಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಾಮಾಜಿಕ ಹೋರಾಟಗಾರ ಜೋಳರಾಶಿ ತಿಮ್ಮಪ್ಪ, ಪ್ರಮುಖರಾದ ಲಕ್ಷ್ಮಣ, ರಾಮಕೃಷ್ಣ, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






