Ballari | ಶಿಕ್ಷಕರೇ ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳು: ಪ್ರಭು ಮಹಾಸ್ವಾಮೀಜಿ
138ನೇ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಸಂಡೂರು/ಬಳ್ಳಾರಿ, ಸೆ.19: ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ, ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವರ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು ಎಂದು ಮ.ನಿ.ಪ್ರ.ಪ್ರಭು ಮಹಾಸ್ವಾಮೀಜಿ ಹೇಳಿದರು.
138ನೇ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಬಳ್ಳಾರಿ, ತಾಲೂಕು ಪಂಚಾಯಿತಿ ಸಂಡೂರು ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ಕರ್ನಾಟಕದಲ್ಲೇ ಡಿಜಿಟಲ್ ತಂತ್ರಜ್ಞಾನದ ಮೂಲಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ನೀಡುವ ನಿಟ್ಟಿನಲ್ಲಿ ಸಂಡೂರಿನಲ್ಲಿ ಕ್ರಾಂತಿಕಾರಿ ಕೆಲಸಗಳು ನಡೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬಾಲ್ಯದ ಘಟನೆಯನ್ನು ಸ್ಮರಿಸಿದ ಅವರು, ಅವರ ಶಿಕ್ಷಕ ಅಯ್ಯಾದೊರೈ ಸಮುದ್ರ ತೀರಕ್ಕೆ ಕರೆದೊಯ್ದು ಹಕ್ಕಿಗಳ ಹಾರಾಟವನ್ನು ಪ್ರತ್ಯಕ್ಷವಾಗಿ ತೋರಿಸಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿದ್ದರು. ಇಂತಹ ಪ್ರೇರಣೆ ನೀಡುವ ಶಿಕ್ಷಕರೇ ಮಕ್ಕಳ ಜೀವನವನ್ನು ರೂಪಿಸುತ್ತಾರೆ ಎಂದರು.
ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಸಾವಿತ್ರಿಬಾಯಿ ಫುಲೆ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಕರೆ ನೀಡಿದರು.
ಪ್ರಧಾನ ಉಪನ್ಯಾಸ ನೀಡಿದ ಡಾ. ಜಗದೀಶ್ ಬಸಾಪುರ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ವಿದ್ಯಾರಣ್ಯರಿಂದ ವಿಜಯನಗರ ಸಾಮ್ರಾಜ್ಯ ನಿರ್ಮಾಣ, ರಾಮಕೃಷ್ಣ ಪರಮಹಂಸರಿಂದ ವಿವೇಕಾನಂದರ ವಿಕಾಸ ಹಾಗೂ ಸಮರ್ಥ ರಾಮದಾಸರಿಂದ ಶಿವಾಜಿ ಮಹಾರಾಜರ ಬೆಳವಣಿಗೆ ಗುರುಗಳ ಮಾರ್ಗದರ್ಶನದ ಮಹತ್ವವನ್ನು ತೋರಿಸುತ್ತದೆ ಎಂದರು.
ಶಿಕ್ಷಕ ವೃತ್ತಿ ಕೇವಲ ಸಂಬಳಕ್ಕಾಗಿ ಮಾಡುವ ಕೆಲಸವಲ್ಲ, ಅದು ಅತ್ಯಂತ ಪವಿತ್ರವಾದ ಜವಾಬ್ದಾರಿಯಾಗಿದೆ. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು. ಅಬ್ದುಲ್ ಕಲಾಂ ಅವರ ಮಾತಿನಂತೆ ಪ್ರಶ್ನೆ ಕೇಳುವ ಪ್ರತಿಯೊಬ್ಬ ಮಗುವಿನಲ್ಲೂ ವಿಜ್ಞಾನಿಯ ಸಾಮರ್ಥ್ಯ ಅಡಗಿದೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ (AI) ಯಾವುದೇ ಪ್ರಶ್ನೆಗೆ ಉತ್ತರ ನೀಡಬಹುದು. ಆದರೆ ಶಿಕ್ಷಕರಲ್ಲಿರುವ ಮಾನವೀಯ ಸ್ಪರ್ಶ, ಉದ್ದೇಶ ಮತ್ತು ಭಾವನೆಗಳನ್ನು AI ನೀಡಲು ಸಾಧ್ಯವಿಲ್ಲ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಶಿಕ್ಷಕರ ಸ್ಥಾನವನ್ನು ಅದು ತುಂಬಲಾರದು ಎಂದು ಡಾ. ಜಗದೀಶ್ ಬಸಾಪುರ ಅಭಿಪ್ರಾಯಪಟ್ಟರು.
ಶಾಸಕಿ ಅನ್ನಪೂರ್ಣ ಈ. ತುಕಾರಾಂ ಮಾತನಾಡಿ, ಶಿಕ್ಷಕರು ಸಮಾಜವನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಕೊಂಡೊಯ್ಯುವ ಶಕ್ತಿಯಾಗಿದ್ದಾರೆ ಎಂದರು.
ಸಂಡೂರು ತಾಲೂಕಿನ ಶ್ರೀಮಂತ, ಮಧ್ಯಮ ಹಾಗೂ ಬಡ ವರ್ಗದ ಮಕ್ಕಳಿಗೆ ಯಾವುದೇ ಭೇದಭಾವವಿಲ್ಲದೆ ಗುಣಮಟ್ಟದ ಹಾಗೂ ಸಮಾನ ಶಿಕ್ಷಣ ದೊರೆಯುವಂತೆ ಮಾಡುವುದು ಶಿಕ್ಷಕರು ಮತ್ತು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ತಾಲೂಕಿನ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕಾ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬಿಕೆಜಿ ಶಾಲೆಯ ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಗೂ ಭರತನಾಟ್ಯ ಪ್ರದರ್ಶಿಸಿದರು. ಬಳಿಕ ಸಂಡೂರು ತಾಲೂಕಿನ ಶೈಕ್ಷಣಿಕ ಸಾಧನೆಗಳನ್ನು ಬಿಂಬಿಸುವ ‘ಸಾಧನ ಹೆಜ್ಜೆ’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಇಒ ಮಡಗಿನ ಬಸಪ್ಪ, ಬಿಇಒ ಡಾ. ಐ.ಆರ್. ಅಕ್ಕಿ, ಸಿಡಿಪಿಒ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ವೆಂಕಟೇಶ್, ನೂರುದ್ದೀನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಬಿ. ನಾಗನಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಸಿಒ ಗೂಳೆಪ್ಪ ಹಾಗೂ ಶ್ರೀಧರ್ ಮೂರ್ತಿ ನಿರೂಪಿಸಿದರು. ಶರಣಬಸಪ್ಪ ಕರಿಶೆಟ್ಟಿ ಸ್ವಾಗತಿಸಿದರು.






