Ballari | ಕಂಪ್ಲಿ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ ಮೂವರು ಅವಿರೋಧ ಆಯ್ಕೆ

ಬಳ್ಳಾರಿ / ಕಂಪ್ಲಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಾಗಿ ಹಡಪದ ಜಡೆಪ್ಪ, ಹನುಮಂತಪ್ಪ ಹಾಗೂ ಐ. ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ್ ಸುಗ್ಗೇನಹಳ್ಳಿ ಘೋಷಿಸಿದರು.
ಇತ್ತೀಚೆಗೆ ಕಾರ್ಯಕಾರಿ ಸಮಿತಿಯ ಮೂರು ಸದಸ್ಯ ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಐದು ಮಂದಿ ನಾಮಪತ್ರ ಸಲ್ಲಿಸಿದ್ದರು. ನಂತರ ಇಬ್ಬರು ನಾಮಪತ್ರ ಹಿಂಪಡೆದ ಹಿನ್ನೆಲೆ ಹಡಪದ ಜಡೆಪ್ಪ, ಹನುಮಂತಪ್ಪ ಹಾಗೂ ಐ. ಗಂಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು.
ಆದರೆ, ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಕೆಲ ದಿನಗಳ ಕಾಲ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಇದೀಗ ಕೋರ್ಟ್ ಚುನಾವಣೆಯನ್ನು ಮುಂದುವರಿಸಲು ಅನುಮತಿ ನೀಡಿದ ಹಿನ್ನೆಲೆ, ಕಂಪ್ಲಿ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಚುನಾವಣಾ ಕಚೇರಿಯಲ್ಲಿ ಚುನಾವಣಾಧಿಕಾರಿ ರಮೇಶ್ ಸುಗ್ಗೇನಹಳ್ಳಿ ಹಾಗೂ ಸಹಾಯಕ ಚುನಾವಣಾಧಿಕಾರಿ ನಾಗರಾಜ ನೇತೃತ್ವದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಶುಕ್ರವಾರ ಅಧಿಕೃತ ಪಟ್ಟಿಯನ್ನು ಪ್ರಕಟಿಸಲಾಯಿತು.
ನಂತರ ನೂತನ ಸದಸ್ಯರಾದ ಹನುಮಂತಪ್ಪ, ಐ. ಗಂಗಮ್ಮ ಹಾಗೂ ಗೈರಾಗಿದ್ದ ಹಡಪದ ಜಡೆಪ್ಪ ಅವರ ಪರವಾಗಿ ಪತ್ನಿ ಎಸ್. ರೇಣುಕಮ್ಮ ಜಡೆಪ್ಪ ಪ್ರಮಾಣ ಪತ್ರ ಸ್ವೀಕರಿಸಿದರು.
ಈ ವೇಳೆ ನೂತನ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ದೊಡ್ಡಬಸಪ್ಪ, ಸಹ ಶಿಕ್ಷಕರಾದ ಮರಿಸ್ವಾಮಿ, ಎನ್. ಚಂದ್ರಶೇಖರ, ವೀರಕುಮಾರ, ಮಲ್ಲಿಕಾರ್ಜುನ, ಸಿ.ಕೆ. ರಾಮಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.






