Ballari | VBGRAM-G ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ತರಬೇತಿ

ಸಂಡೂರು/ಬಳ್ಳಾರಿ : ಗ್ರಾಮೀಣಾಭಿವೃದ್ಧಿ ಮತ್ತು ಉದ್ಯೋಗ ಖಾತೆಯ ಮಹತ್ವಾಕಾಂಕ್ಷೆಯ VBGRAM-G ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಸಂಡೂರು ತಾಲೂಕು ಪಂಚಾಯಿತಿಯ ಎಂ.ವೈ. ಘೋರ್ಪಡೆ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ವಸಂತ ರಾಜ್ ಅಧ್ಯಕ್ಷತೆ ವಹಿಸಿ, ಯೋಜನೆಯ ಉದ್ದೇಶ, ಅನುಷ್ಠಾನದ ವಿಧಾನ ಹಾಗೂ ವಿವಿಧ ಇಲಾಖೆಗಳ ಪಾತ್ರ ಕುರಿತು ಮಾಹಿತಿ ನೀಡಿದರು.
ಮಾಸ್ಟರ್ ಟ್ರೈನರ್ ಆಗಿ ಭಾಗವಹಿಸಿದ್ದ ಕುರುಕೋಡು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿಗೆ ಯೋಜನೆಯ ಮಾರ್ಗಸೂಚಿಗಳು, ಅನುಷ್ಠಾನದ ಹಂತಗಳು, ದಾಖಲೆ ನಿರ್ವಹಣೆ, ಇಲಾಖೆಗಳ ಸಮನ್ವಯ ಹಾಗೂ ಕ್ಷೇತ್ರಮಟ್ಟದ ಕಾರ್ಯವಿಧಾನಗಳ ಕುರಿತು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಡೇಟಾ ಎಂಟ್ರಿ ಆಪರೇಟರ್‌ಗಳು, ತಾಂತ್ರಿಕ ಸಂಯೋಜಕರು, ಎಂಐಎಸ್ ಮತ್ತು ಐಇಸಿ ಸಂಯೋಜಕರು, ತಾಂತ್ರಿಕ ಹಾಗೂ ಆಡಳಿತ ಸಹಾಯಕರು, ಬಿಎಫ್‌ಟಿ ಸಿಬ್ಬಂದಿ ಮತ್ತು ಗ್ರಾಮ ಕಾಯಕ ಮಿತ್ರರು ಭಾಗವಹಿಸಿದ್ದರು.
ಯೋಜನೆಯನ್ನು ಗ್ರಾಮ ಮಟ್ಟದಲ್ಲಿ ಸಮರ್ಪಕವಾಗಿ ಜಾರಿಗೊಳಿಸಿ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಗ್ರಾಮೀಣ ಜನತೆಗೆ ಅದರ ಪ್ರಯೋಜನಗಳನ್ನು ತಲುಪಿಸುವ ಕುರಿತು ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಲಾಯಿತು.






