ಬಳ್ಳಾರಿ | ರೈತರ ಆದಾಯ ಹೆಚ್ಚಿಸಲು ಬಹುಬೆಳೆ ಪದ್ಧತಿ ತರಬೇತಿ ಅಗತ್ಯ: ಡಾ. ಹನುಮಂತಪ್ಪ

ಬಳ್ಳಾರಿ, ಡಿ.19: ಜಿಲ್ಲೆಯಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ವಿಜ್ಞಾನಿಗಳು ಬಹುಬೆಳೆ ಪದ್ಧತಿಯ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಹನುಮಂತಪ್ಪ ಅವರು ಹೇಳಿದರು.
ನಗರದ ಐ.ಸಿ.ಎ.ಆರ್–ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ 25ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ತಂತ್ರಜ್ಞಾನಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ಸಂಗ್ರಹಿಸಿ, ಅದರ ಆಧಾರದ ಮೇಲೆ ಮುಂದಿನ ವರ್ಷದ ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಈ ಉನ್ನತ ಮಟ್ಟದ ಸಭೆಯು ಕಳೆದ ವರ್ಷದ ಕೃಷಿ ಪ್ರಗತಿಯನ್ನು ಪರಿಶೀಲಿಸಿ, ಮುಂಬರುವ ಬೆಳೆ ಹಂಗಾಮಿನ ಕ್ರಿಯಾಯೋಜನೆಯನ್ನು ಅಂತಿಮಗೊಳಿಸುವ ಮಹತ್ವದ ವೇದಿಕೆಯಾಗಿದೆ ಎಂದು ತಿಳಿಸಿದರು.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ್ ಮಾತನಾಡಿ, ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳು ನೇರವಾಗಿ ರೈತರ ಹೊಲಗದ್ದೆಗಳಿಗೆ ತಲುಪುವಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಪ್ರಮುಖ ಪಾತ್ರ ವಹಿಸಬೇಕು. ರೈತರ ಹೊಲದ ಸಮಸ್ಯೆಗಳಿಗೆ ಸ್ಪಂದಿಸಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಒತ್ತು ನೀಡಬೇಕೆಂದು ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 1.13 ಲಕ್ಷ ಹೆಕ್ಟೇರ್ ಪ್ರದೇಶವು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಕೇವಲ ಭತ್ತದ ಬೆಳೆ ಅವಲಂಬಿಸಿದ್ದಾರೆ. ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವುದರಿಂದ, ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಿ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕಗಳ ಬಳಕೆಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಪಾಲಯ್ಯ ಪಿ. ಅವರು ಪ್ರಸ್ತುತ ವರ್ಷದಲ್ಲಿ ಕೈಗೊಂಡ ಕಾರ್ಯಕ್ರಮಗಳ ವರದಿ ಹಾಗೂ 2024–25ನೇ ಸಾಲಿನ ಚಟುವಟಿಕೆಗಳ ವಿವರಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಗೃಹ ವಿಜ್ಞಾನಿ ಡಾ. ರಾಜೇಶ್ವರಿ ಸ್ವಾಗತಿಸಿದರು. ಮಣ್ಣು ವಿಜ್ಞಾನಿ ಡಾ.ರವಿ ಎಸ್. ವಂದಿಸಿದರು. ಸಭೆಯಲ್ಲಿ ಹಗರಿ ಕೃಷಿ ಕಾಲೇಜಿನ ಪ್ರಭಾರ ಅಧಿಕಾರಿ ಡಾ.ರವಿ ಶಂಕರ್, ಪಶು ವೈದ್ಯಕೀಯ ಪ್ರಾಧ್ಯಾಪಕ ಡಾ.ರಮೇಶ್, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಸಂಶೋಧಕ ಡಾ.ಜಯಪ್ರಕಾಶ್ ನಿಡುಗುಂದಿ, ನಬಾರ್ಡ್ ಅಧಿಕಾರಿ ಯುವರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಭಾ ಸದಸ್ಯರು, ಪ್ರಗತಿಪರ ರೈತರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.







