Ballari | ವಿಶ್ವಕರ್ಮ ಜಯಂತಿ ಆಚರಣೆ
ವಿಶ್ವಕರ್ಮ ಸಮಾಜದ ಪ್ರತಿಯೊಬ್ಬರೂ ಹುಟ್ಟಿನಿಂದಲೇ ಇಂಜಿನಿಯರ್‌ಗಳು: ತಹಶೀಲ್ದಾರ್ ಅನಿಲ್ ಕುಮಾರ್

ಸಂಡೂರು/ಬಳ್ಳಾರಿ: ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಪಾರಂಪರಿಕ ಕಲೆ, ಕುಲಕಸುಬು ಹಾಗೂ ಸಮಾಜದ ಕೊಡುಗೆಗಳ ಕುರಿತು ಗಣ್ಯರು ಮಾತನಾಡಿದರು.
ಮುಖ್ಯ ಉಪನ್ಯಾಸ ನೀಡಿದ ವೀರೇಶ್ ಶರ್ಮ ಅವರು, ವಿಶ್ವಕರ್ಮ ಜಯಂತಿಯ ಮಹತ್ವ ಹಾಗೂ ವಿಶ್ವಕರ್ಮ ಸಮಾಜದ ಪಾರಂಪರಿಕ ಹಿನ್ನೆಲೆಯನ್ನು ವಿವರಿಸಿ, ಶತಮಾನಗಳಿಂದ ವಿವಿಧ ಕಲೆ ಮತ್ತು ವೃತ್ತಿಗಳ ಮೂಲಕ ಸಮಾಜಕ್ಕೆ ಸಮುದಾಯ ನೀಡಿರುವ ಕೊಡುಗೆಯನ್ನು ಸ್ಮರಿಸಿದರು.
ತಹಶೀಲ್ದಾರ್ ಜಿ. ಅನಿಲ್ ಕುಮಾರ್ ಮಾತನಾಡಿ, ವಿಶ್ವಕರ್ಮ ಸಮಾಜದವರು ಹುಟ್ಟಿನಿಂದಲೇ ವಿವಿಧ ಕಲೆಗಳನ್ನು ಮೈಗೂಡಿಸಿಕೊಂಡಿರುವ ಕುಶಲಕರ್ಮಿಗಳಾಗಿದ್ದು, ಪ್ರತಿಯೊಬ್ಬರೂ ಒಬ್ಬೊಬ್ಬ ಇಂಜಿನಿಯರ್‌ಗೆ ಸಮಾನರು ಎಂದು ಶ್ಲಾಘಿಸಿದರು.
ಕಾರ್ಮಿಕ ಇಲಾಖೆಯ ನಿರೀಕ್ಷಕ ಮಂಜುನಾಥ ತೊಂಡಿಹಾಳ್ ಮಾತನಾಡಿ, ವಿಶ್ವಕರ್ಮ ಸಮುದಾಯದವರು ಕಾರ್ಮಿಕ ಇಲಾಖೆಯಿಂದ ದೊರೆಯುವ ಸ್ಮಾರ್ಟ್ ಕಾರ್ಡ್‌ಗಳನ್ನು ಪಡೆದು ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೊತೆಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಪ್ರತಿವರ್ಷ ಕಡ್ಡಾಯವಾಗಿ ನವೀಕರಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ರವೀಂದ್ರಚಾರ್, ಉಪಾಧ್ಯಕ್ಷ ಕಾರ್ತಿಕೇಶ್ ಆಚಾರ್, ಗೌರವಾಧ್ಯಕ್ಷ ಷಣ್ಮುಖಪ್ಪ ಪತ್ತಾರ್, ವಿಶ್ವಕರ್ಮ ಯುವಕ ಮಂಡಳಿ ಅಧ್ಯಕ್ಷ ವಿವೇಕಾನಂದ ಆಚಾರ್ ಹಾಗೂ ಕಾರ್ಯದರ್ಶಿ ವಿಜಯ್ ಕುಮಾರ್ ಪತ್ತಾರ್ ಸೇರಿದಂತೆ ಸಮಾಜದ ಮುಖಂಡರು, ಯುವಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.






