Ballari | ಮಹಿಳೆಯರು ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು: ಶಾಸಕಿ ಅನ್ನಪೂರ್ಣ ಈ.ತುಕಾರಾಮ್
ಮೂರನೇ ಪ್ರಜಾಸೇವಾ ಆಂದೋಲನ ಸಭೆ

ಸಂಡೂರು/ಬಳ್ಳಾರಿ : ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಹಿಳೆಯರು ತಮ್ಮ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಪ್ರಜಾಸೇವಾ ಆಂದೋಲನದಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಸಂಡೂರು ಶಾಸಕಿ ಅನ್ನಪೂರ್ಣ ಈ. ತುಕಾರಾಮ್ ಕರೆ ನೀಡಿದರು.
ಸಂಡೂರು ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಮೂರನೇ ಪ್ರಜಾಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸಾರ್ವಜನಿಕರು ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ತ್ವರಿತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ :
ತಾಲೂಕಿನಲ್ಲಿ ಹೆಣ್ಣುಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬಾಲಕಿಯರು ಉನ್ನತ ಶಿಕ್ಷಣ ಪಡೆಯಲು ಅಗತ್ಯ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಡೂರಿಗೆ ಬಿ.ಎಸ್ಸಿ. ನರ್ಸಿಂಗ್ ಕಾಲೇಜು ಮಂಜೂರಾಗಿದ್ದು ಶೀಘ್ರದಲ್ಲೇ ಭೂಮಿಪೂಜೆ ನೆರವೇರಲಿದೆ ಎಂದು ಶಾಸಕಿ ತಿಳಿಸಿದರು.
ಬಾಲ್ಯವಿವಾಹವು ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಭವಿಷ್ಯಕ್ಕೆ ಅಡ್ಡಿಯಾಗುವುದರಿಂದ, ಬಾಲಕಿಯರು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಕುಟುಂಬ ಹಾಗೂ ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜನರ ಬಳಿಗೆ ಸರ್ಕಾರ :
ಬಳ್ಳಾರಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್ ಮಾತನಾಡಿ, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರವೇ ಜನರ ಬಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ನಡೆದ ಸಭೆಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಸುಮಾರು 15 ರಿಂದ 20 ಶೇಕಡಾ ಕುಂದುಕೊರತೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದ್ದು, ಉಳಿದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಪಡಿತರ ಚೀಟಿ, ಪಿಂಚಣಿ, ಸಾರಿಗೆ, ಶಾಲೆ, ಅಂಗನವಾಡಿ, ಆರೋಗ್ಯ, ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಮನವಿಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಹಿರಿಯ ನಾಗರಿಕರ ಮನವಿಗೆ ಸ್ಪಂದನೆ :
ಸಂಡೂರು ಅಂಚೆ ಕಚೇರಿ ಮೊದಲ ಮಹಡಿಯಲ್ಲಿರುವುದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂಬ ಮನವಿಯನ್ನು ಪ್ರಜಾಸೇವಾ–PGRS ಪೋರ್ಟಲ್ ನಲ್ಲಿ ದಾಖಲಿಸಿ, ಅಂಚೆ ಕಚೇರಿಯನ್ನು ನೆಲಮಹಡಿಗೆ ಸ್ಥಳಾಂತರಿಸುವ ಕುರಿತು ಸಂಬಂಧಪಟ್ಟ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕೈಗೊಂಡ ಕ್ರಮದ ಮಾಹಿತಿಯನ್ನು ಅರ್ಜಿದಾರರಿಗೆ ನೀಡುವಂತೆ ನಿರ್ದೇಶನ ನೀಡಲಾಗಿದೆ.
ವಿವಿಧ ಯೋಜನೆಗಳ ಸೌಲಭ್ಯ ವಿತರಣೆ :
ಕಾರ್ಯಕ್ರಮದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳು ಹಾಗೂ ಚೆಕ್‌ಗಳನ್ನು ವಿತರಿಸಲಾಯಿತು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಅಧಿಕಾರಿಗಳು ಫಲಾನುಭವಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹ್ಯಾರಿಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಎಂ.ಡಿ. ಜುಬೇರ್ ಅಹಮದ್, ಸಹಾಯಕ ಆಯುಕ್ತ ರಾಜೇಶ್ ಡಿ.ಹೆಚ್., ಡಿವೈಎಸ್ಪಿ ಪ್ರಸಾದ್ ಗೋಖಲೆ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಾಗೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಕ್ಷಯ ಲಾಡ್ ವಾಡಾ, ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನೂರುದ್ದೀನ್ ಎಸ್., ಸಂಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ತಹಶೀಲ್ದಾರ್ ಅನಿಲ್ ಕುಮಾರ್ ಜಿ., ವೃತ್ತ ನಿರೀಕ್ಷಕ ಮಹೇಶ್‌ಗೌಡ ಬಿ., ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸಂಡೂರು ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್ ಕುಮಾರ್ ಗೌಡ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭೆ ಸದಸ್ಯರು, ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಸರ್ವ ಸಮಾಜದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಮನವಿಗಳನ್ನು ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.






