Ballari | ಮನರೇಗಾ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಪಂ ಸಿಇಒ ಎಂ.ಡಿ.ಹ್ಯಾರಿಸ್ ಸುಮೇರ್

ಸಂಡೂರು/ಬಳ್ಳಾರಿ: ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಎಂ.ಡಿ. ಹ್ಯಾರಿಸ್ ಸುಮೇರ್ ಅವರು ಸಂಡೂರು ತಾಲೂಕಿನ ಮೆಟ್ರಿಕಿ ಹಾಗೂ ವಿಠಲಾಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟವನ್ನು ವೀಕ್ಷಿಸಿದರು. ಅಲ್ಲದೆ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಿ, ಅವರಿಗೆ ದೊರೆಯುತ್ತಿರುವ ಉದ್ಯೋಗ, ವೇತನ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಎಂ.ಡಿ. ಹ್ಯಾರಿಸ್ ಸುಮೇರ್ ಅವರು ಮನರೇಗಾ ಯೋಜನೆಯಡಿ ವಿಶೇಷವಾಗಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ (ಎನ್‌ಆರ್‌ಎಂ) ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮಣ್ಣು ಮತ್ತು ಜಲ ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಗ್ರ ಕೆರೆಗಳ ಅಭಿವೃದ್ಧಿ, ಕುಂಟೆಗಳ ಅಭಿವೃದ್ಧಿ ಹಾಗೂ ಜಲ ಸಂರಕ್ಷಣೆಗೆ ಸಂಬಂಧಿಸಿದ ಶಾಶ್ವತ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು.
ಇದೇ ವೇಳೆ ರೈತರಿಗೆ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಕೃಷಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಮನರೇಗಾ ಯೋಜನೆಯಡಿ ಕೈಗೊಳ್ಳಲು ಪ್ರೋತ್ಸಾಹಿಸಿದರು.
“ನರೇಗಾ ಯೋಜನೆಯಿಂದ ಗ್ರಾಮೀಣ ರೈತರಿಗೆ ಶಾಶ್ವತ ಆಸ್ತಿಗಳು ನಿರ್ಮಾಣವಾಗಬೇಕು. ಕೃಷಿ ಅಭಿವೃದ್ಧಿಗೆ ನೆರವಾಗುವ ಕಾಮಗಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಬೇಕು” ಎಂದು ಅವರು ತಿಳಿಸಿದರು.
ಕೂಲಿ ಕಾರ್ಮಿಕರೊಂದಿಗೆ ಮಾತನಾಡಿದ ಅವರು, “ನರೇಗಾ ಕೆಲಸ ಹೊರತುಪಡಿಸಿ ನೀವು ಬೇರೆ ಯಾವ ಕೆಲಸಗಳನ್ನು ಮಾಡುತ್ತೀರಿ” ಎಂದು ಪ್ರಶ್ನಿಸಿ ಅವರ ಜೀವನೋಪಾಯದ ಬಗ್ಗೆ ಮಾಹಿತಿ ಪಡೆದರು.
60 ವರ್ಷ ಮೇಲ್ಪಟ್ಟ ಕೂಲಿ ಕಾರ್ಮಿಕರಿಗೆ ಕಾಮಗಾರಿ ಅಳತೆಯಲ್ಲಿ ಶೇಕಡಾ 50ರಷ್ಟು ರಿಯಾಯಿತಿ ಇರುವುದರಿಂದ, ಅವರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಅನುಕೂಲವಾಗುವ ರೀತಿಯಲ್ಲಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕರಾದ ವಸಂತ್ ರಾಜ್, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






