ಕಂಪ್ಲಿಯಲ್ಲಿ ಬಿಇಒ ಕಛೇರಿ ಆರಂಭಿಸುವಂತೆ ರಾಜ್ಯ ಮಟ್ಟದಲ್ಲಿ ಧ್ವನಿ ಎತ್ತುವೆ : ಶಶೀಲ್ ಜಿ.ನಮೋಶಿ

ಬಳ್ಳಾರಿ / ಕಂಪ್ಲಿ: ಕಂಪ್ಲಿಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಒತ್ತಡ ಹೇರಲಾಗುವುದು ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ(ಈಶಾನ್ಯ ಶಿಕ್ಷಕರ ಕ್ಷೇತ್ರ) ಶಶೀಲ್ ಜಿ.ನಮೋಶಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅತಿಥಿ ಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಗಣತಿಗೆ ಶಿಕ್ಷಕರನ್ನು ಬಳಸಿಕೊಂಡು, ಅವರಿಗೆ ತೊಂದರೆ ನೀಡುತ್ತಿದ್ದಾರೆ. ಕಂಪ್ಲಿ ಹೊಸ ತಾಲೂಕು ಕೇಂದ್ರವಾದ ಮೇಲೆ ಇಲ್ಲಿನ ಶಿಕ್ಷಕರ ಸಂಬಳಕ್ಕೆ ಸಂಬಂಧಿಸಿದಂತೆ ತಾಲೂಕುವಾರು ಹಣ ಹಂಚಿಕೆ ಮಾಡಿಲ್ಲ. ಆದ್ದರಿಂದ ಇಲ್ಲಿನ ಶಿಕ್ಷಕರಿಗೆ ಸಮಸ್ಯೆ ಉಂಟಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಶಿಕ್ಷಕರ ಖಾಲಿ ಹುದ್ದೆಗಳಿವೆ. ಆದಷ್ಟು ಬೇಗ ಸರ್ಕಾರ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಒಳ ಮೀಸಲಾತಿ ನೆಪದಲ್ಲಿ ಶಿಕ್ಷಕರ ನೇಮಕಾತಿ ಕಡೆಗಣಿಸಿದ್ದಾರೆ. ಅತಿಥಿ ಶಿಕ್ಷಕರ ಬಾಕಿ ವೇತನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಶಿವರಾಜ, ರೋಶನ್, ಶಿವುಕುಮಾರ್, ನವೀನ್ ಸೇರಿದಂತೆ ಇತರರು ಇದ್ದರು.





