ಬಳ್ಳಾರಿ | ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 16ನೇ ಸಂಸ್ಥಾಪನಾ ದಿನಾಚರಣೆ
ಶೈಕ್ಷಣಿಕ ಕ್ರಾಂತಿಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಪ್ರಮುಖವಾಗಿದೆ : ಪ್ರೊ.ತೇಜಸ್ವಿ ವಿ.ಕಟ್ಟಿಮನಿ

ಬಳ್ಳಾರಿ : ಶೈಕ್ಷಣಿಕ ಕ್ರಾಂತಿಯಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರ ಪ್ರಮುಖವಾಗಿದ್ದು, ಪತ್ರಿಯೊಬ್ಬರು ಉನ್ನತ ಶಿಕ್ಷಣ ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಆಂಧ್ರಪ್ರದೇಶದ ಕೇಂದ್ರೀಯ ಗಿರಿಜನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ತೇಜಸ್ವಿ ವಿ.ಕಟ್ಟಿಮನಿ ಅವರು ಹೇಳಿದರು.
ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದ ಮುಖ್ಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 16ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವನದಲ್ಲಿ ಶಿಕ್ಷಣ ವ್ಯವಸ್ಥೆ ಅತೀ ಮುಖ್ಯವಾದ ಭಾಗ. ಕಾಲಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇಡೀ ವಿಶ್ವದ ಗಮನ ಸೆಳೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ನಮ್ಮ ರಾಷ್ಟ್ರದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಬಂದು ಉನ್ನತ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಸಾಕಷ್ಟು ಬದಲಾವಣೆಗಳು ಹೊಸ-ಹೊಸ ಆವಿಷ್ಕಾರಗಳು ಕೂಡ ಇದಕ್ಕೆ ಕಾರಣವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಆಡಳಿತಾಧಿಕಾರಿ ಎಸ್.ಎನ್.ರುದ್ರೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಈ ಹಿಂದೆ ನಾನು ವಿಶ್ವವಿದ್ಯಾಲಯದಲ್ಲಿ ಕುಲಸಚಿವನಾಗಿದ್ದು, ನನ್ನ ಆಡಳಿತ ಅವಧಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಬಹಳ ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದರು. 18 ವರ್ಷದ ನನ್ನ ಕೆಲಸದ ಸೇವೆಯಲ್ಲಿ ಯಾವ ಕೆಲಸವು ಇಂತಹ ಸಂತೋಷ ನೀಡಿರಲಿಲ್ಲ, ಇಂದಿಗೂ ಸಹ ವಿವಿಯಲ್ಲಿ ಮಾಡಿದ ಕೆಲಸದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ನೃತ್ಯ ಮತ್ತು ಕಲೆ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ರೀಕೃ ವಿಶ್ವವಿದ್ಯಾಲಯದ ಕುಲಸಚಿವ ನಾಗರಾಜು.ಸಿ., ಕುಲಸಚಿವ(ಮೌಲ್ಯಮಾಪನ) ಪ್ರೊ.ಎನ್.ಎಂ.ಸಾಲಿ, ಹಣಕಾಸು ಅಧಿಕಾರಿ ನಾಗರಾಜ, ಕಾರ್ಯಕ್ರಮ ಸಂಯೋಜಕ ಪ್ರೊ.ಎನ್.ಶಾಂತನಾಯ್ಕ್ ಸೇರಿದಂತೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







