ಬಳ್ಳಾರಿ | ರೈತರ ಆದಾಯ ಹೆಚ್ಚಳಕ್ಕೆ ಕೃಷಿ ಪರಿಕರ ಮಾರಾಟಗಾರರ ಸಹಕಾರ ಅಗತ್ಯ : ಡಾ.ಮಂಜುನಾಥ್ ಎಂ.ವಿ.

ಬಳ್ಳಾರಿ: ಕೃಷಿ ಕ್ಷೇತ್ರದಲ್ಲಿ ರೈತರ ಕೈಹಿಡಿದ ಸಲಹೆಗಾರರಾಗಿ ಕೃಷಿ ಪರಿಕರ ಮಾರಾಟಗಾರರು ಬೆಳೆದು, ರೈತರ ಆದಾಯ ವೃದ್ಧಿಗೆ ಪ್ರಮುಖ ಪಾತ್ರವಹಿಸಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಮಂಜುನಾಥ್ ಎಂ.ವಿ ಅವರು ತಿಳಿಸಿದ್ದಾರೆ.
ಬುಧವಾರ ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಯಚೂರು), ಮ್ಯಾನೇಜ್ಮೆಂಟ್ ಹೈದರಾಬಾದ್, ಸಮೇತಿ (ಉತ್ತರ) ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಇಲಾಖೆ ಬಳ್ಳಾರಿ, ಕೃಷಿ ತಂತ್ರಜ್ಞಾನ ಸಂಸ್ಥೆ ಬಳ್ಳಾರಿ ಘಟಕ ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಗರಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೋಮೋ” ಕೋರ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಅಮರೇಗೌಡ ಎ. ಅವರು ಮಾತನಾಡಿ, ಕೃಷಿ ಪರಿಕರ ವ್ಯಾಪಾರಿಗಳು ತಾಂತ್ರಿಕ ಜ್ಞಾನ ಪಡೆದು ರೈತರಿಗೆ ವಿಶ್ವಾಸಾರ್ಹ ಸಲಹೆಗಾರರಾಗಿ ಪರಿಣತಿ ಪಡೆಯಬೇಕು ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಕೆ.ಎಂ ಅವರು ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ತಾಂತ್ರಿಕ ಮಾರ್ಗದರ್ಶನ ನೀಡುವುದರಿಂದ ರೈತರಿಗೆ ಉತ್ಪಾದಕತೆ ಹೆಚ್ಚಿಸಲು ನೆರವಾಗಬಹುದು. ಈ ಕೋರ್ಸ್‌ನಿಂದ ಸ್ಥಳೀಯ ಮಟ್ಟದಲ್ಲಿ ನೈಪುಣ್ಯಯುತ ಸೇವೆಗಳು ಬೆಳೆಯಲಿವೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 80 ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿ, ಕೋರ್ಸ್‌ನ ಉದ್ದೇಶ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸಮೇತಿ (ಉತ್ತರ) ಧಾರವಾಡ ಡಿಎಇಎಸ್‌ಐ ನ ರಾಜ್ಯ ನೋಡೆಲ್ ಅಧಿಕಾರಿ ಡಾ.ಜಾಧವಎಸ್.ಎನ್., ಹಗರಿಯ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಹಿರಿಯ ವಿಜ್ಞಾನಿ ಡಾ.ಪಾಲಯ್ಯ.ಪಿ., ಹಗರಿ ಕೃಷಿ ಮಹಾವಿದ್ಯಾಲಯದ ಪ್ರಭಾರಿ ಅಧಿಕಾರಿ ಡಾ.ರವಿಶಂಕರ್.ಜಿ, ಪ್ರಾಧ್ಯಾಪಕ (ಪಶು ವಿಜ್ಞಾನ) ಡಾ.ರಮೇಶ್ ಬಿ.ಕೆ., ಹಿರಿಯ ವಿಜ್ಞಾನಿ (ಮಣ್ಣು ವಿಜ್ಞಾನ) ಡಾ.ರವಿ.ಎಸ್., ವಿಜ್ಞಾನಿ (ಕೃಷಿ ವಿಸ್ತರಣೆ) ಡಾ.ನವೀನ್‌ಕುಮಾರ್.ಪಿ., ವಿಜ್ಞಾನಿ (ಗೃಹ ವಿಜ್ಞಾನ) ಡಾ.ರಾಜೇಶ್ವರಿ ಆರ್., ಕೃಷಿ ತಂತ್ರಜ್ಞಾನ ಸಂಸ್ಥೆಯ ಕಾರ್ಯದರ್ಶಿ ಗುರು ಬಸವರಾಜ್‌ಟಿ.ಎಮ್ ಸೇರಿದಂತೆ ಇತರರು ಭಾಗವಹಿಸಿದ್ದರು.







