ಬಳ್ಳಾರಿ | ಸಂತೋಷ, ಶಾಂತಿ ಸಮಾಧಾನದ ಹಬ್ಬ ಕ್ರಿಸ್ಮಸ್ : ಶಾಸಕ ಜೆ.ಎನ್.ಗಣೇಶ

ಬಳ್ಳಾರಿ / ಕಂಪ್ಲಿ: ಮುಂದಿನ ದಿನಗಳಲ್ಲಿ ಚರ್ಚ್‌ಗಳಿಗೆ ಅಗತ್ಯ ಅನುದಾನ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ ಅವರು ಹೇಳಿದರು.
ಪಟ್ಟಣದ ಸೋಮಪ್ಪ ದೇವಸ್ಥಾನದ ಬಳಿಯಿರುವ ಎಲ್-ಷಡ್ಡಾಯ್ ಚರ್ಚ್‌ನಲ್ಲಿ ಗುರುವಾರ ಆಯೋಜಿಸಿದ್ದ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಕೇಕ್ ಕತ್ತರಿಸಿದ ಬಳಿಕ ಅವರು ಮಾತನಾಡಿದರು. ಕ್ರಿಸ್‌ಮಸ್ ಹಬ್ಬವು ಸಂತೋಷ, ಶಾಂತಿ ಮತ್ತು ಸಮಾಧಾನದ ಶ್ರೇಷ್ಠ ಹಬ್ಬವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಕಲಿಸುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.
ಎಲ್-ಷಡ್ಡಾಯ್ ಚರ್ಚ್‌ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿರುವುದು ಸಂತಸ ತಂದಿದೆ. ಸೋಮಪ್ಪ ದೇವಸ್ಥಾನದಿಂದ ಚರ್ಚ್‌ವರೆಗಿನ ರಸ್ತೆಯನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಚರ್ಚ್ ಸಭಾಪಾಲಕ ಪಾಸ್ಟರ್ ಪಾಲ್ ಪಂಪಾಪತಿ ಮಾತನಾಡಿ, ಮನುಷ್ಯ ಮನುಷ್ಯನನ್ನು ಪ್ರೀತಿಸುವಾಗ ಮನಸ್ಸಿನಲ್ಲಿ ದೇವರು ಜನಿಸುತ್ತಾನೆ. ಮಕ್ಕಳಿಗಾಗಿ ತಂದೆ–ತಾಯಿ ತ್ಯಾಗ ಮಾಡುತ್ತಾರೆ. ಮಕ್ಕಳು ವೃದ್ಧಾಪ್ಯದಲ್ಲಿ ತಂದೆ–ತಾಯಿಯರನ್ನು ಪಾಲಿಸಬೇಕು. ಬಡವರು, ಹಸಿದವರು ಹಾಗೂ ರೋಗಿಗಳ ಸೇವೆ ಮಾಡಬೇಕು. ಸ್ವಾರ್ಥ, ಅಹಂಕಾರ ಹಾಗೂ ದರ್ಪವನ್ನು ಬಿಟ್ಟು ಜೀವನ ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಉಸ್ಮಾನ್, ಸದಸ್ಯ ಸಿ.ಆರ್. ಹನುಮಂತ, ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಲ್ಲೇಶಪ್ಪ, ಮುಖಂಡರಾದ ಕೆ. ಷಣ್ಮುಕಪ್ಪ, ಮೆಹಬೂಬ್, ಶಶಿಕುಮಾರ, ಸಿ. ವಿರುಪಾಕ್ಷಿ, ಸೋಮಪ್ಪ, ಮೌಲಪ್ಪ, ಹುಲುಗಪ್ಪ, ಗಣೇಶ, ಮಾರೆಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







