ಬಳ್ಳಾರಿ | ನಿಡುಗುರ್ತಿಯಲ್ಲಿ ಮಾಯಮ್ಮ ದೇವಿ ದೇಗುಲ ಲೋಕಾರ್ಪಣೆ

ಸಂಡೂರು: ತಾಲೂಕಿನ ನಿಡುಗುರ್ತಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಮಾಯಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಗಳು ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿದವು.
ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಮದ್ ಜಗದ್ಗುರು ಡಾ. ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಸೋಮವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗಂಗಾಪೂಜೆ, ಗೋ ಪೂಜೆ, ದೇವಾಲಯ ಪ್ರವೇಶ ಮತ್ತು ನವಗ್ರಹ ಹೋಮಗಳು ನಡೆದವು. ಮಂಗಳವಾರ ಬ್ರಾಹ್ಮೀ ಮುಹೂರ್ತದಲ್ಲಿ ದುರ್ಗಾ ಹೋಮ, ನವಗ್ರಹ ಹೋಮ ಹಾಗೂ ಮೃತ್ಯುಂಜಯ ಹೋಮಗಳ ಬಳಿಕ, ಜಗದ್ಗುರುಗಳ ಹಸ್ತದಿಂದ ದೇವಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ ಹಾಗೂ ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಗದ್ಗುರುಗಳನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ದೇಗುಲ ನಿರ್ಮಾಣದಲ್ಲಿ ಶ್ರಮಿಸಿದ ಶಿಲ್ಪಿಗಳು ಹಾಗೂ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ನಂತರ ಆಶೀರ್ವಚನ ನೀಡಿದ ಉಜ್ಜಯಿನಿ ಜಗದ್ಗುರುಗಳು, ಮಹಿಳೆಯರು ಮತ್ತು ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣುವುದು ನಮ್ಮ ಪ್ರಾಚೀನ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರೂ ಇಂತಹ ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಬರಗಾಲದ ಪರಿಸ್ಥಿತಿಯ ನಡುವೆಯೂ ಗ್ರಾಮಸ್ಥರು ಒಗ್ಗಟ್ಟಿನಿಂದ ಈ ಧಾರ್ಮಿಕ ಕಾರ್ಯ ನೆರವೇರಿಸಿರುವುದು ಶ್ಲಾಘನೀಯ. ದೇವಿಯ ಕೃಪೆಯಿಂದ ಉತ್ತಮ ಮಳೆ–ಬೆಳೆಯಾಗಿ ನಾಡು ಸುಭಿಕ್ಷವಾಗಲಿ ಎಂದು ಹಾರೈಸಿದರು.






