ಬಳ್ಳಾರಿ | ವೃತ್ತಿಪರ ಶಿಕ್ಷಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಲ; ಕಂಪ್ಲಿಯ 44 ವಿದ್ಯಾರ್ಥಿಗಳಿಗೆ ಒಲಿದ ‘ಸುಜ್ಞಾನ ನಿಧಿ’ ಶಿಷ್ಯವೇತನ

ಬಳ್ಳಾರಿ / ಕಂಪ್ಲಿ: "ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಜಾಗೃತಿ ಬೆಳೆಸಿಕೊಳ್ಳಬೇಕು" ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ನಿರ್ದೇಶಕ ರೋಹಿತಾಶ್ವ ಹೇಳಿದರು.
ತಾಲೂಕಿನ ಯೋಜನಾ ಕಚೇರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಸುಜ್ಞಾನ ನಿಧಿ ಶಿಷ್ಯವೇತನ’ ಮಂಜೂರಾತಿ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಯೋಜನೆಯ ಪಾಲುದಾರ ಕುಟುಂಬಗಳ ಬಡ ಮಕ್ಕಳು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಪ್ರತಿ ವರ್ಷ ಸಂಸ್ಥೆಯ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ರಾಜ್ಯಾದ್ಯಂತ 1,18,000 ವಿದ್ಯಾರ್ಥಿಗಳಿಗೆ 32.44 ಕೋಟಿ ಮೌಲ್ಯದ ಶಿಷ್ಯವೇತನ ಒದಗಿಸಲಾಗಿದೆ. ಈ ಬಾರಿ ಕಂಪ್ಲಿ ತಾಲೂಕಿನ ಸುಮಾರು 44 ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ಸಿಕ್ಕಿದೆ" ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ, ಪುರಸಭೆ ಮಾಜಿ ಸದಸ್ಯ ಎನ್. ರಾಮಾಂಜನೇಯ, ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಡಿ.ಮೌನೇಶ್, ವಾಸವಿ ವಿದ್ಯಾಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಡಿ.ಶ್ರೀಧರ ಶ್ರೇಷ್ಠಿ, ಜಿಲ್ಲಾ ಜನ ಜಾಗೃತಿ ವೇದಿಕೆ ಕೋಶಾಧಿಕಾರಿ ಡಾ.ಸಿ.ವೆಂಕಟೇಶ ಬರಮಕ್ಕನವರ್, ಯೋಜನಾಧಿಕಾರಿ ಎಲ್.ರಾಘವೇಂದ್ರ, ಕೃಷಿ ಅಧಿಕಾರಿ ಎಸ್.ಬಿ. ಸಂಜುಕುಮಾರ್ ಹಾಗೂ ಮೇಲ್ವಿಚಾರಕ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






