ಬಳ್ಳಾರಿ | ವಿಶೇಷಚೇತನರಿಗೆ ಸಹಾಯಕ ಸಾಧನಗಳ ವಿತರಣೆ

ಸಿರುಗುಪ್ಪ : ಬದುಕಿನ ಸವಾಲುಗಳನ್ನು ಎದುರಿಸುತ್ತಿರುವ ವಿಶೇಷಚೇತನರ ಸ್ವಾವಲಂಬನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮಹತ್ವದ ಹೆಜ್ಜೆ ಇಟ್ಟಿದೆ. 2025-26ನೇ ಸಾಲಿನ ಎಸ್‌ಎನ್‌ಸಿ ಅನುದಾನದಡಿ ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿರಿಸಿರುವ ಶೇ.5ರ ಯೋಜನೆಯಡಿ ವಿಶೇಷಚೇತನರಿಗೆ ವಿವಿಧ ಸಹಾಯಕ ಸಾಧನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಾಲ್ವರು ವಿಶೇಷಚೇತನರಿಗೆ ತ್ರಿಚಕ್ರ ಸೈಕಲ್, 9 ಅಂಧ ಫಲಾನುಭವಿಗಳಿಗೆ ಊರುಗೋಲು ಹಾಗೂ ವಾಕಿಂಗ್ ಸ್ಟಿಕ್‌ಗಳು, ಶ್ರವಣ ಸಮಸ್ಯೆ ಹೊಂದಿರುವ ಫಲಾನುಭವಿಗಳಿಗೆ 12 ಶ್ರವಣ ಯಂತ್ರಗಳು ಹಾಗೂ ದೈಹಿಕ ವಿಶೇಷಚೇತನರಿಗೆ 10 ವೀಲ್‌ಚೇರ್‌ಗಳನ್ನು ವಿತರಿಸಲಾಯಿತು.
ಈ ಸಾಧನಗಳು ಫಲಾನುಭವಿಗಳ ದಿನನಿತ್ಯದ ಚಟುವಟಿಕೆಗಳನ್ನು ಸುಗಮಗೊಳಿಸುವಲ್ಲಿ ಸಹಾಯಕವಾಗಲಿವೆ.ಸಮಾಜದ ಮುಖ್ಯವಾಹಿನಿಯಲ್ಲಿ ವಿಶೇಷಚೇತನರನ್ನು ಸಬಲೀಕರಿಸುವ ಉದ್ದೇಶದೊಂದಿಗೆ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಫಲಾನುಭವಿಗಳು ಸಹ ಈ ನೆರವು ತಮ್ಮ ಜೀವನಕ್ಕೆ ದೊಡ್ಡ ಆಸರೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ, ಸಿಎಒ ಗಾದಿಲಿಂಗನಗೌಡ, ನೈರ್ಮಲ್ಯ ಮೇಲ್ವಿಚಾರಕ ಹಸನ್‌ಸಾಬ್, ಯುಆರ್‌ಡಿಡಬ್ಲ್ಯೂ ಅಂಬಯ್ಯ ಹಾಗೂ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.






