ಬಳ್ಳಾರಿ| ಘನ ವಾಹನ ಸಂಚಾರಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್

ಬಳ್ಳಾರಿ: ನಗರದಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಘನ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ಪರಿಷ್ಕೃತ ಮಾರ್ಗಗಳು ಮತ್ತು ಸಮಯದ ನಿರ್ಬಂಧಗಳನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ 2026ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 121 ರಸ್ತೆ ಅಪಘಾತಗಳು ಸಂಭವಿಸಿದ್ದು, ಈ ಅಪಘಾತಗಳಲ್ಲಿ 44 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿದ ವರದಿಯ ಆಧಾರದ ಮೇಲೆ, ಈ ಹಿಂದೆ ಜಾರಿಯಲ್ಲಿದ್ದ 2023ರ ಡಿಸೆಂಬರ್ 19 ಹಾಗೂ 2026ರ ಜೂನ್ 16ರ ಅಧಿಸೂಚನೆಗಳನ್ನು ಹಿಂಪಡೆದು ಈ ಹೊಸ ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ ಸಂಚಾರ ಮಾರ್ಗಗಳು: ಹೊಸ ಆದೇಶದಂತೆ ತೋರಣಗಲ್ಲು ಹಾಗೂ ಕುಡತಿನಿ ಕಡೆಯಿಂದ ಸಿರುಗುಪ್ಪ ಕಡೆಗೆ ಸಂಚರಿಸುವ ಲಾರಿಗಳು ಹೊಸಪೇಟೆ ರಸ್ತೆ ಬೈಪಾಸ್, ಹಲಕುಂದಿ ಬೈಪಾಸ್, ಎಪಿಎಂಸಿ ಸರ್ಕಲ್, ಮೋತಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಾಲ್ಮೀಕಿ ಸರ್ಕಲ್ ಹಾಗೂ ಹವಂಬಾವಿ ಮಾರ್ಗವಾಗಿ ಸಾಗಬೇಕು. ಹಾಗೆಯೇ ಮೋಕಾ ಮತ್ತು ಆಲೂರು ಕಡೆಯಿಂದ ಸಿರುಗುಪ್ಪ ಕಡೆಗೆ ತೆರಳುವ ವಾಹನಗಳು ಕೆಇಬಿ, ಸಂಗಂ ಸರ್ಕಲ್, ಅನಂತಪುರ ಬೈಪಾಸ್, ಹಲಕುಂದಿ ಬೈಪಾಸ್, ಎಪಿಎಂಸಿ ಸರ್ಕಲ್, ಮೋತಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ವಾಲ್ಮೀಕಿ ಸರ್ಕಲ್ ಮತ್ತು ಹವಂಬಾವಿ ಮುಖಾಂತರ ಚಲಿಸಬೇಕಿದೆ. ಇನ್ನು ಬೆಂಗಳೂರು ಹಾಗೂ ಚಳ್ಳಕೆರೆ ಕಡೆಯಿಂದ ಬಂದು ಅನಂತಪುರ ಮತ್ತು ತೋರಣಗಲ್ಲು ಕಡೆಗೆ ತೆರಳುವ ಲಾರಿಗಳು ಎನ್‌ಎಚ್-67 ಅಂಕೋಲ-ಗುತ್ತಿ ಬೈಪಾಸ್ ರಸ್ತೆ ಹಾಗೂ ಹೊಸಪೇಟೆ ಬೈಪಾಸ್ ರಸ್ತೆ ಮೂಲಕವೇ ಸಂಚರಿಸಲು ಸೂಚಿಸಲಾಗಿದೆ.
ಸಮಯ ಮತ್ತು ವೇಗಮಿತಿ ನಿಯಮಗಳು: ಭಾರಿ ವಾಹನಗಳ ನಗರ ಪ್ರವೇಶಕ್ಕೆ ಕಟ್ಟುನಿಟ್ಟಿನ ಸಮಯ ನಿಗದಿಪಡಿಸಲಾಗಿದೆ. ಲಾರಿಗಳಿಗೆ ಬೆಂಗಳೂರು ಮತ್ತು ಸಿರುಗುಪ್ಪ ರಸ್ತೆಗಳ ನಡುವೆ ಮಧ್ಯಾಹ್ನ 12 ರಿಂದ 3 ಗಂಟೆಯೊಳಗೆ ಮಾತ್ರ ನಗರದೊಳಗೆ ಸಂಚರಿಸಲು ಅವಕಾಶ ನೀಡಲಾಗಿದೆ. ಸಿಮೆಂಟ್, ಕಲ್ಲುಬಂಡೆ, ಜೆಲ್ಲಿ, ಮರಳು, ಗರುಸು, ಡಾಂಬರ್, ಎಂ-ಸ್ಯಾಂಡ್ ಹಾಗೂ ಗಣಿ ಸಾಮಗ್ರಿಗಳನ್ನು ಸಾಗಿಸುವ ಟಿಪ್ಪರ್ ಲಾರಿಗಳಿಗೆ ರಾತ್ರಿ 11 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ಇರುತ್ತದೆ. ಜೊತೆಗೆ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಭಾರಿ ವಾಹನಗಳು (HGV) ಗಂಟೆಗೆ ಗರಿಷ್ಠ 30 ಕಿ.ಮೀ. ವೇಗಮಿತಿಯಲ್ಲಿ ಮಾತ್ರ ಚಲಿಸಬೇಕು ಎಂದು ಸೂಚಿಸಿದ್ದಾರೆ.
ಅಗತ್ಯ ವಸ್ತುಗಳ ಅಧಿನಿಯಮ 1955ರನ್ವಯ ವೈದ್ಯಕೀಯ ಸಾಮಗ್ರಿಗಳು, ಔಷಧಿಗಳು, ಹಣ್ಣು, ತರಕಾರಿ, ಹಾಲು, ಇಂಧನ, ರಸಗೊಬ್ಬರ, ಅಡುಗೆ ಅನಿಲ , ಪಡಿತರ ಅಕ್ಕಿ, ಪೋಸ್ಟಲ್ ಹಾಗೂ ಕೊರಿಯರ್ ವಾಹನಗಳು ಮತ್ತು ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳ ನಗರ ಪ್ರವೇಶಕ್ಕೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.






