ಬಳ್ಳಾರಿ | ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ

ಬಳ್ಳಾರಿ : ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಕಾನೂನಾತ್ಮಕವಾಗಿ ಸಿಗಬೇಕಾದ ಎಲ್ಲ ಸೌಕರ್ಯ, ಸೌಲಭ್ಯಗಳನ್ನು ಪೂರೈಸುವುದು ಆಯಾ ನಗರ ಸ್ಥಳೀಯ-ಸಂಸ್ಥೆಗಳ ಮುಖ್ಯಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಶುಕ್ರವಾರ ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮದಡಿ ರಚಿತವಾದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ/ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ವಸತಿ ಮತ್ತು ಪುನರ್ವಸತಿ ಹಾಗೂ ಪೌರ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಲು ಕ್ರಮವಹಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ನಿಗದಿಪಡಿಸಿದ ವೇತನ ಪಾವತಿಸುವುದು ಹಾಗೂ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮ್ಯಾನ್ಯುವೆಲ್ ಸ್ಯಾವೆಂಜರ್ಸ್ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಪ್ರವೇಶ ಶುಲ್ಕ, ವಿದ್ಯಾರ್ಥಿ ವೇತನ, ಲ್ಯಾಪ್ ಟಾಪ್ ವಿತರಣೆ ಹಾಗೂ ಇತರೆ ಸೌಲಭ್ಯ ಒದಗಿಸಲು ಮುತುವರ್ಜಿ ವಹಿಸಬೇಕು ಎಂದರು.
ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸದಸ್ಯರಾದ ಕಂದಕೂರ ರಾಮುಡು ಅವರು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹಾರೀಸ್ ಸುಮೇರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದಿನ್, ಸಮಿತಿ ಸದಸ್ಯರಾದ ಅರುಣ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ನಗರ ಸ್ಥಳೀಯ-ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.







