ಕನ್ನಡ ಸಾಹಿತ್ಯ ಪರಿಷತ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಬಳ್ಳಾರಿಯ ಜಿಲ್ಲಾಧಿಕಾರಿ ಸೂಚನೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಸಂಡೂರು ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಆದರ್ಶಕಲ್ಯಾಣ ಮಂಟಪದಲ್ಲಿ ಜೂ.29ರಂದು ಆಯೋಜನೆಗೊಂಡ ಕನ್ನಡ ಸಾಹಿತ್ಯ ಪರಿಷತ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ಎಲ್ಲಾ ಸಾಹಿತಿಗಳಿಗೆ ಅನುಕೂಲವಾಗುವ ಸ್ಥಳಕ್ಕೆ ಸ್ಥಳಾಂತರಿಸಲು ಬಳ್ಳಾರಿ ಜಿಲ್ಲಾಧಿಕಾರಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಸೂಚಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಸದರಿ ಸಭೆಯನ್ನು ನಡೆಸದಂತೆ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮತ್ತು ಇತರರು ಸಹಿ ಮಾಡಿರುವ ಮನವಿ ಪತ್ರವನ್ನು ಪರಿಶೀಲಿಸಿ ವರದಿಯನ್ನು ನೀಡಲು ತೋರಣಗಲ್ ಉಪವಿಭಾಗದ ಡಿಎಸ್ಪಿ ಅವರಿಗೆ ಸೂಚಿಸಲಾಗಿದೆ. ಸಭೆಗೆ ರಾಜ್ಯದ ವಿವಿಧ ಕಡೆಯಿಂದ ಬರುವಂತಹ ಸಾಹಿತಿಗಳಿಗೆ ಸಂಡೂರು ಪಟ್ಟಣದ ಆದರ್ಶಕಲ್ಯಾಣ ಮಂಟಪದಲ್ಲಿ ಸ್ಥಳಾವಕಾಶವು ಕಡಿಮೆಯಿದ್ದು, ಸರಿಯಾದ ಮೂಲಸೌಕರ್ಯಗಳಿರುವುದಿಲ್ಲ ಎಂಬ ವರದಿಯನ್ನು ಡಿಎಸ್ಪಿ ನೀಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜೊತೆಗೆ ಸಂಡೂರು ಪಟ್ಟಣದಲ್ಲಿ ಗಣಿಗಾರಿಕೆಯ ಅದಿರನ್ನು ಸಾಗಾಟ ಮಾಡುವ ಟಿಪ್ಪರ್-ಲಾರಿಗಳ ಓಡಾಟವು ಹೆಚ್ಚಿದ್ದು, ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಘೋರ ರಸ್ತೆ ಅಪಘಾತಗಳುಂಟಾಗುತ್ತಿದ್ದು, ಸಾಹಿತಿಗಳ ಪ್ರಯಾಣದ ವೇಳೆ ಅಹಿತಕರ ಘಟನೆಯುಂಟಾದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಮಸ್ಯೆ ತೀವ್ರವಾಗಿರುತ್ತದೆಂದು ವರದಿ ಸಲ್ಲಿಸಿರುತ್ತಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿಗೆ ಯಾವುದೇ ಅನಾನುಕೂಲವಾಗದಂತೆ ಕ್ರಮವಹಿಸಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರವಹಿಸುವ ಜವಾಬ್ದಾರಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ನ ಸಾಮಾನ್ಯ ಸಭೆಯನ್ನು ಆಯೋಜಿಸಲು ಪರವಾನಿಗೆ ನೀಡಬಾರದೆಂದು ಡಿಎಸ್ಪಿ ವರದಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.