ಬಳ್ಳಾರಿ| ಮೂರು ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಸರಕಾರಿ ಹೊರಗುತ್ತಿಗೆ ನೌಕರರ ಸಂಘದಿಂದ ಧರಣಿ

ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂಪ್ಲಿ ತಾಲೂಕು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ತಾಲೂಕಾಧ್ಯಕ್ಷ ಡಿ.ಆರ್.ಪಾಂಡುರಂಗ ನೇತೃತ್ವದಲ್ಲಿ ನೌಕರರು ಪಟ್ಟಣದ ನೀರಾವರಿ ಇಲಾಖೆಯ ಉಪವಿಭಾಗದ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಡಿ.ಆರ್.ಪಾಂಡುರಂಗ, ಕಂಪ್ಲಿ ನೀರಾವರಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಾಕಷ್ಟು ಜನರು ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ ತಿಂಗಳ ಹಾಗೂ 2025ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಸೇರಿದಂತೆ ಒಟ್ಟಾರೆಯಾಗಿ ಮೂರು ತಿಂಗಳ ಬಾಕಿ ವೇತನ ಬಾರದೆ ನೌಕರರ ಜೀವನ ನಿರ್ವಾಹಣೆ ಕಷ್ಟಕರವಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಆದ್ದರಿಂದ ಅನಿವಾರ್ಯವಾಗಿ ಧರಣಿ ಮಾಡಬೇಕಾಯಿತು. ಕೂಡಲೇ ಅಧಿಕಾರಿಗಳು ಹೊರಗುತ್ತಿಗೆ ನೌಕರರ ಸಂಕಷ್ಟವನ್ನಾಲಿಸಿ, ವೇತನ ಜಾರಿ ಮಾಡಬೇಕು. ಭವಿಷ್ಯ ನಿಧಿ, ಇಎಸ್‌ಐ ಕಟ್ಟಬೇಕು. ನಾಲ್ಕೈದು ದಿನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುನಿರಾಬಾದ್‌ನ ಮುಖ್ಯ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹೆಚ್.ಜಡೆಮೂರ್ತಿ, ಪದಾಧಿಕಾರಿಗಳಾದ ಎಂ.ಜಡೆಪ್ಪ, ಡಿ.ಸೋಮೇಶ್, ಗಂಗಯ್ಯಸ್ವಾಮಿ, ಯರ‍್ರೆಪ್ಪ, ಹೆಚ್.ಗಾದೆಪ್ಪ, ಸುಂದರರಾಜ್, ಸಿ.ಡಿ.ಜಡೇಶ, ಹನುಮನಾಯಕ, ವಿರುಪಣ್ಣ, ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





