ಬಳ್ಳಾರಿ | ಸೊಳ್ಳೆ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಿ: ಡಾ.ಆರ್.ಅಬ್ದುಲ್ಲಾ

ಬಳ್ಳಾರಿ : ಸಾರ್ವಜನಿಕರು ತಮ್ಮ ಮನೆಯ ಸುತ್ತ-ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಹೇಳಿದರು.
ಬಳ್ಳಾರಿ ತಾಲ್ಲೂಕಿನ ಮೋಕ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯ ವಣೇನೂರು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಅವರು ಮಾತನಾಡಿದರು.
ಯಾರಿಗಾದರೂ 3 ದಿನಗಳ ಕಡಿಮೆಯಾಗದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ನಿರ್ಲ್ಯಕ್ಷಿಸದೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆಯಂತೆ ಲಕ್ಷಣಗಳ ಆಧಾರದ ಮೇರೆಗೆ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮನೆಗಳಿಗೆ ಭೇಟಿ ನೀಡಿ ಡ್ರಮ್, ಬ್ಯಾರಲ್, ನೀರಿನ ತೊಟ್ಟಿ, ಕಲ್ಲಿನ ಡೋಣಿ, ಹೂವಿನ ಕುಂಡಲ ಮುಂತಾದ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವಂತೆ ಹಾಗೂ ಮುಚ್ಚಳ ಮುಚ್ಚಿ ಬಟ್ಟೆ ಕಟ್ಟಬೇಕು. ಬಳಕೆ ಮಾಡದ ನೀರು ಸಂಗ್ರಹಕಗಳಿಗೆ ಕೊಬ್ಬರಿ ಎಣ್ಣೆ ಹಾಕುವ ಮೂಲಕ ಸೊಳ್ಳೆ ಉತ್ಪತ್ತಿ ತಡೆಯಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎನ್‌ವಿಬಿಡಿಸಿಪಿ ಸಲಹೆಗಾರ ಪ್ರತಾಪ್, ಸಮುದಾಯ ಆರೋಗ್ಯ ಅಧಿಕಾರಿ ತಿಮ್ಮರಾಜು, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಸೇರಿದಂತೆ ಆಶಾಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.







