ಬಳ್ಳಾರಿ | ಉಚಿತ ಅರೋಗ್ಯ ತಪಾಸಣಾ, ಔಷಧ ವಿತರಣಾ ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ: ಗಿಡಮೂಲಿಕೆ ಆಧಾರಿತ ಔಷಧಿಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ದೈಹಿಕ ಆರೋಗ್ಯಕ್ಕೆ ಯೋಗ ವ್ಯಾಯಾಮ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಧ್ಯಾನ–ಪ್ರಾರ್ಥನೆ ಸಹಾಯಕವಾಗುತ್ತದೆ ಎಂದು ಬಿಎಸ್‌ವಿ ಸಂಸ್ಥೆಯ ಅಧ್ಯಕ್ಷ ಕಲ್ಗುಡಿ ವಿಶ್ವನಾಥ ಹೇಳಿದರು.
ಸ್ಥಳೀಯ ಭಾರತೀಯ ಶಿಶು ವಿದ್ಯಾಲಯ ಆವರಣದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಆಯುಷ್ಮಾನ್ ಆರೋಗ್ಯ ಮಂದಿರ ಮತ್ತು ಗಂಗಾವತಿಯ ಸುಲೋಚಿನ ಆಯುಷ್ ಥೆರಪಿ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಹಾಗೂ ಔಷಧ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿಯ ಮಡಿಲಿಗೆ ಹೋದಾಗ ತಾಯಿಯ ಮಡಿಲಿಗೆ ಸೇರಿದ ಅನುಭವವಾಗುತ್ತದೆ. ಇದರಿಂದ ನಮ್ಮಲ್ಲಿರುವ ಋಣಾತ್ಮಕ ಅಂಶಗಳು ಹಾಗೂ ಖಿನ್ನತೆ ದೂರವಾಗಿ ಧನಾತ್ಮಕ ಚಿಂತನೆ ಬೆಳೆಯುತ್ತದೆ ಮತ್ತು ಮಾನಸಿಕ ಸ್ಥಿರತೆ ಹೆಚ್ಚುತ್ತದೆ ಎಂದು ಹೇಳಿದರು. ಅತಿಯಾದ ಔಷಧಿಗಳ ಸೇವನೆಯಿಂದ ದೇಹದ ಪ್ರಕೃತಿದತ್ತವಾದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅಡುಗೆ ಮನೆಯಲ್ಲಿಯೇ ಅನೇಕ ಔಷಧೀಯ ಗುಣಗಳಿರುವ ಪದಾರ್ಥಗಳಿದ್ದು, ಮಹಿಳೆಯರು ಸಂಸಾರದ ಜಂಜಾಟಗಳ ನಡುವೆ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಸಲಹೆ ನೀಡಿದರು.
ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪ್ರಹ್ಲಾದ್ ಐಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಆದರೆ ಅನಾರೋಗ್ಯವನ್ನು ನಾವೇ ಅನುಭವಿಸಬೇಕಾಗುತ್ತದೆ ಎಂದರು. ನೈಸರ್ಗಿಕ ಆಹಾರ ಸೇವನೆ, ಪ್ರಕೃತಿಯ ಮಡಿಲಲ್ಲಿ ಜೀವನ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿದ ಕಷಾಯ ಸೇವನೆಯ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಆಯುಷ್ ಪದ್ಧತಿಯನ್ನು ಮುಖ್ಯವಾಹಿನಿಗೆ ತಂದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಶಿಬಿರದ ಉದ್ದೇಶವಾಗಿದ್ದು, ಹೆಚ್ಚಿನವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. ಶಿಬಿರದಲ್ಲಿ ಸುಮಾರು 160 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಬಿಎಸ್‌ವಿ ಶಾಲೆಯ ಜಿ.ವಾದಿರಾಜರಾವ್, ಮುಖ್ಯಗುರು ಶಾಮ್‌ಸುಂದರ್, ವೈದ್ಯಾಧಿಕಾರಿಗಳಾದ ಡಾ.ಕೆ.ಶ್ರೀದೇವಿ, ಡಾ.ನಾಗರಾಜ ಬಿ ಗುಂಡ್ಲನೂರು, ಆಯುಷ್ ಇಲಾಖೆಯ ಸಿಬ್ಬಂದಿಗಳಾದ ಶಂಕ್ರಮ್ಮ, ಸೌಮ್ಯ, ಗಂಗಾಧರ ಇದ್ದರು.







