ಬಳ್ಳಾರಿ | ನಿಡುಗುರ್ತಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ

ಸಂಡೂರು/ಬಳ್ಳಾರಿ: ತಾಲೂಕಿನ ಚೋರನೂರು ಹೋಬಳಿಯ ನಿಡುಗುರ್ತಿ ಗ್ರಾಮದಲ್ಲಿ ಕಾರಿ ಹುಣ್ಣಿಮೆ ಹಬ್ಬವನ್ನು ಸಾಂಪ್ರದಾಯಿಕ ವೈಭವ, ಸಂಭ್ರಮ ಹಾಗೂ ಶಾಂತಿಯುತ ವಾತಾವರಣದಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ಆಚರಿಸಿದರು. ಗ್ರಾಮೀಣ ಸಂಸ್ಕೃತಿ, ಕೃಷಿ ಪರಂಪರೆ ಮತ್ತು ಜಾನುವಾರುಗಳ ಮೇಲಿನ ಗೌರವವನ್ನು ಪ್ರತಿಬಿಂಬಿಸುವ ಈ ವಿಶಿಷ್ಟ ಆಚರಣೆ ನೂರಾರು ಜನರ ಗಮನ ಸೆಳೆಯಿತು.
ಹಬ್ಬದ ಅಂಗವಾಗಿ ಗ್ರಾಮದ ರೈತರು ತಮ್ಮ ಎತ್ತುಗಳು ಹಾಗೂ ಹೋರಿಗಳನ್ನು ಬಣ್ಣಬಣ್ಣದ ವಸ್ತ್ರಗಳು, ಹೂಮಾಲೆಗಳು, ಗಂಟೆಗಳು ಹಾಗೂ ವಿವಿಧ ಅಲಂಕಾರಿಕ ಸಾಮಗ್ರಿಗಳಿಂದ ಸಿಂಗರಿಸಿ ಗ್ರಾಮದ ಹೆಬ್ಬಾಗಿಲು ಬಳಿ ಕರೆತಂದು ಪ್ರದರ್ಶಿಸಿದರು. ಸಿಂಗರಿಸಿದ ಎತ್ತುಗಳ ವೈಭವವನ್ನು ಕಣ್ತುಂಬಿಕೊಂಡ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದರು.
ಬಳಿಕ ಅಲಂಕೃತ ಹೋರಿಗಳು ಮತ್ತು ಎತ್ತುಗಳನ್ನು ಗ್ರಾಮದ ಕೆರೆಯ ಆವರಣಕ್ಕೆ ಕರೆದೊಯ್ದು ಅಲ್ಲಿಂದ ಓಟದ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಗ್ರಾಮದ ಮುಖ್ಯ ದ್ವಾರದಲ್ಲಿ ಹಸಿರು ತೋರಣವನ್ನು ಕಟ್ಟಲಾಗಿದ್ದು, ಓಟದಲ್ಲಿ ಮುಂಚೂಣಿಗೆ ಬಂದು ಆ ತೋರಣವನ್ನು ಮೊದಲಿಗೆ ಹರಿದು ಹಾಕಿದ ಹೋರಿ ಅಥವಾ ಎತ್ತನ್ನು ಆ ವರ್ಷದ ವಿಜೇತ ಎಂದು ಗ್ರಾಮಸ್ಥರು ಘೋಷಿಸುವ ಸಂಪ್ರದಾಯವನ್ನು ಈ ಬಾರಿಯೂ ಅಚ್ಚುಕಟ್ಟಾಗಿ ಪಾಲಿಸಲಾಯಿತು.
ಓಟದ ಸ್ಪರ್ಧೆಯ ವೇಳೆ ಯುವಕರು, ರೈತರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹರ್ಷೋದ್ಗಾರಗಳ ನಡುವೆ ತಮ್ಮ ನೆಚ್ಚಿನ ಹೋರಿಗಳಿಗೆ ಉತ್ತೇಜನ ನೀಡಿದರು. ಹಬ್ಬದ ಉತ್ಸಾಹದಿಂದ ಇಡೀ ಗ್ರಾಮ ಸಂಭ್ರಮದ ವಾತಾವರಣದಲ್ಲಿ ಮುಳುಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಗ್ರಾಮಸ್ಥರು ಪರಸ್ಪರ ಸಹಕಾರ, ಸೌಹಾರ್ದತೆ ಹಾಗೂ ಶಿಸ್ತುಬದ್ಧವಾಗಿ ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು. ಗ್ರಾಮೀಣ ಜೀವನದ ಬೇರುಗಳನ್ನು ಉಳಿಸಿಕೊಂಡಿರುವ ಈ ಆಚರಣೆ, ಜಾನುವಾರುಗಳ ಮೇಲಿನ ಕೃತಜ್ಞತೆ, ರೈತರ ಬದುಕಿನ ಮೌಲ್ಯ ಹಾಗೂ ಗ್ರಾಮೀಣ ಸಂಸ್ಕೃತಿಯ ಜೀವಂತ ಪರಂಪರೆಯನ್ನು ಸಾರುವ ವಿಶಿಷ್ಟ ಉತ್ಸವವಾಗಿ ಮೂಡಿಬಂದಿದೆ.






