ಬಳ್ಳಾರಿ ಗುಂಪು ಘರ್ಷಣೆ: ನ್ಯಾಯಾಂಗ ತನಿಖೆಗೆ ಆರ್.ಅಶೋಕ್ ಒತ್ತಾಯ

ಬಳ್ಳಾರಿ: ಬಳ್ಳಾರಿಯಲ್ಲಿ ಗಲಾಟೆ ಮತ್ತು ಗುಂಡೇಟಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ಗುಂಪು ಘರ್ಷಣೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬ್ಯಾನರ್ ಗಲಭೆ ಮತ್ತು ಗುಂಡಿನ ಚಕಮಕಿಯು ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ನಡೆಸಿದ ಪೂರ್ವಯೋಜಿತ ಸಂಚು. ಈ ಘಟನೆಯ ಬಗ್ಗೆ ಸಮಗ್ರವಾದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು. ಬಳ್ಳಾರಿ ಎಸ್‌ಪಿ ಅವರ ಅಮಾನತನ್ನು ಖಂಡಿಸಿರುವ ಆರ್.ಅಶೋಕ್, ಸರಕಾರ ಅಧಿಕಾರಿಗಳನ್ನು ಬಲಿಪಶು ಮಾಡುತ್ತಿದೆ ಮತ್ತು ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಂತೆ ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಹೊಸ ವರ್ಷ ರಕ್ತಸಿಕ್ತ ಅಧ್ಯಾಯದೊಂದಿಗೆ ಆರಂಭವಾಗಿದೆ. ಅದಕ್ಕೆ ಕಾರಣರಾದವರ ಪರವಾಗಿ ಸರಕಾರ ನಿಂತಿದೆ. ಶಾಸಕ ಭರತ್ ರೆಡ್ಡಿ ಮತ್ತು ಬೆಂಬಲಿಗರನ್ನು ಬಂಧಿಸುವ ಬದಲಿಗೆ, ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದು ಏಕೆ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





