ಬಳ್ಳಾರಿ | ಕುವೆಂಪು ಸಾಹಿತ್ಯ ಲೋಕದ ಅದಮ್ಯ ಚೇತನ : ಮುಂಡರಗಿ ನಾಗರಾಜ

ಬಳ್ಳಾರಿ,ಡಿ.29: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ವಿಶ್ವ ಮಾನವ ಸಂದೇಶ ಸಾರುವ ಮೂಲಕ ಕನ್ನಡ ಸಾಹಿತ್ಯ ಲೋಕದ ಅದಮ್ಯ ಚೇತನವಾಗಿದ್ದರು ಎಂದು ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನ ಅಂಗವಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿಗಳು ಸುಂದರ ಪ್ರಕೃತಿಯ ಮೂಲಕ ಸೂರ್ಯೋದಯ ಮತ್ತು ಸೂರ್ಯಸ್ತದಲ್ಲಿ ಸಾಹಿತ್ಯ ಕೃತಿಗಳನ್ನು ಬರೆಯುತ್ತಿದ್ದರು. ಕುವೆಂಪು ಅವರು ಸಹ ಪ್ರಕೃತಿಯ ವರ್ಣನೆಯಿಂದ ಸಮಾಜ ಪರಿವರ್ತನೆ ಮಾಡಿದವರು ಎಂದು ತಿಳಿಸಿದರು.
ಕುವೆಂಪು ಅವರು 1904 ಡಿ.29 ರಂದು ವೆಂಕಟಪ್ಪ ಹಾಗೂ ಸೀತಮ್ಮ ಮಗನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಜನಿಸಿದ್ದರು. ಕುವೆಂಪು ಅವರು ದೇಶದಲ್ಲಿ ಎಲ್ಲಾ ಧರ್ಮಗಳ ಜನರು ಸೌಹರ್ದತೆಯಿಂದ ಬಾಳಬೇಕು. ವಿಭಿನ್ನತೆಯಲ್ಲಿ ಏಕತೆ ಹೊಂದಿ ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಜಾತಿಗಳಿಂದ ದೂರವಿದ್ದು, ವಿಶ್ವ ಮಾನವನಾಗಬೇಕು ಎಂದು ಸಂದೇಶ ಸಾರಿದವರು ಎಂದರು.
ಈಗಿನ ಪೀಳಿಗೆ ಆದರ್ಶ ವ್ಯಕ್ತಿಗಳ ಜೀವನಾಧಾರಿತ ಪುಸ್ತಕಗಳಿಂದ ಉತ್ತಮ ಆದರ್ಶ ಬೆಳೆಸಿಕೊಂಡು ಕುವೆಂಪು ಅವರಂತೆ ಹೆಸರು ಗಳಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿ, ಬುದ್ಧ, ಬಸವಣ್ಣರಂತಹ ವಿಶ್ವ ಮಾನವರ ಸಾಲಿನಲ್ಲಿ ಕುವೆಂಪು ಅವರೂ ಒಬ್ಬರು. ಅವರ ‘ಓ ನನ್ನ ಚೇತನ ಆಗು ನೀ ಅನಿಕೇತನ’ ಕವನದಲ್ಲಿ ಎಲ್ಲರೂ ವಿಶ್ವಮಾನವರಾಗಬೇಕು ಎಂಬ ತತ್ವ ಅಡಗಿತ್ತು. ಜಾತಿ, ಮತ, ಧರ್ಮ ಎಲ್ಲವನ್ನೂ ಮೀರಿ ಬದುಕಬೇಕು ಎಂದು ಕರೆ ನೀಡಿದವರು ಕುವೆಂಪು ಎಂದು ಹೇಳಿದರು.
ಆಕಾಶವಾಣಿ ಉದ್ಘೋಷಕ ಅಮಾತಿ ಬಸವರಾಜ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಸಾಂಸಾರಿಕ ಜೀವನದಲ್ಲಿ ಆಧ್ಯಾತ್ಮಿಕ ಗುರಿ ಸಾಧಿಸಿದವರು ಕುವೆಂಪು. ಕೌಟುಂಬಿಕ ಜೀವನಕ್ಕೆ ಮಹತ್ವ ಕೊಟ್ಟಿದ್ದರೂ ಅವರಿಗೆ ಅಧ್ಯಾತ್ಮದ ಬಗ್ಗೆ ಓಲವಿತ್ತು. ರಾಮಕೃಷ್ಣ ಪರಮಹಂ ಮತ್ತು ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ಆಧ್ಯಾತ್ಮಿಕ ಯಶಸ್ಸು ಸಾಧಿಸಿದವರು ಎಂದು ಹೇಳಿದರು.
ಕುವೆಂಪು ಅವರ ಕನ್ನಡ ಸಾಹಿತ್ಯವನ್ನು ಗ್ರಹಿಸಲಾರದಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಅನೇಕ ಚಳವಳಿಗಳಿಗೆ ಅವರೇ ಸ್ಫೂರ್ತಿಯಾಗಿದ್ದರು ಮತ್ತು ಅವರ ಮುಖ್ಯ ವಿಚಾರಧಾರೆಯಾದ ಮನುಜಮತ-ವಿಶ್ವಪಥ, ಸರ್ವೋದಯ-ಸಮನ್ವಯ ಪೂರ್ಣದೃಷ್ಟಿಯನ್ನು ಕುರಿತು ತಿಳಿಸಿಕೊಟ್ಟವರು ಎಂದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಜಡೇಶ್ ಎಮ್ಮಿಗನೂರು ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ ಸೇರಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.







