ಬಳ್ಳಾರಿ | ಹೆಚ್‌ಐವಿ ಕುರಿತು ಜಾಗೃತಿ ಇರಲಿ: ಡಾ.ಎನ್.ಬಸರೆಡ್ಡಿ

ಬಳ್ಳಾರಿ : ಹೆಚ್‌ಐವಿ ಸೋಂಕಿಗೆ ಒಳಗಾದರೆ ಜೀವನ ಪರ್ಯಂತ್ಯ ಚಿಕಿತ್ಸೆಗೊಳಪಡಬೇಕಾದ ಅನಿವಾರ್ಯವಿದ್ದು, ಯುವ ಪೀಳಿಗೆಯು ಹೆಚ್‌ಐವಿ ಸೋಂಕು ಬಗೆಗಿನ ಜಾಗೃತಿ ಹೊಂದಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್ ಬಸರೆಡ್ಡಿ ಅವರು ಹೇಳಿದರು.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಶ್ರೀಮೇಧಾ ಪದವಿ ಕಾಲೇಜು, ವಿಮುಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ‘ಹೆಚ್‌ಐವಿ ತಡೆಗಟ್ಟಲು ತೀವ್ರಗೊಳಿಸಿದ ಐಇಸಿ ಪ್ರಚಾರ ಅಂದೋಲನ’ ಅಂಗವಾಗಿ ನಗರದ ಕೋಟೆ ಪ್ರದೇಶದ ಶ್ರೀಮೇಧಾ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ಹಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್‌ಐವಿಯನ್ನು ತಡೆಗಟ್ಟಬಹುದದಾದ ಕಾಯಿಲೆಯಾಗಿದ್ದು, ಹೆಚ್‌ಐವಿ ಸೋಂಕಿತರು ಬಳಸಿದ ಸೂಜಿ, ಸಿರಿಂಜ್‌ಗಳನ್ನು ಬಳಕೆ ಮಾಡಬಾರದು. ಹೆಚ್‌ಐವಿ ಸೋಂಕು, ಅದರ ಕಳಂಕ ತಾರತಮ್ಯ ಮತ್ತು ಅದರಿಂದ ಉಂಟಾಗುವ ಮರಣಗಳನ್ನು ಸೊನ್ನೆಗೆ ತರಲು ಎಲ್ಲರೂ ಶ್ರಮಿಸಬೇಕಿದೆ. ಯುವಜನತೆಯು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ, ಹೆಚ್‌ಐವಿಯು ಅಸುರಕ್ಷಿತ ಲೈಂಗಿಕ ಕ್ರಿಯೆ, ಪರೀಕ್ಷೆ ಮಾಡದ ರಕ್ತ ಪಡೆಯುವುದರಿಂದ ಈ ಸೋಂಕು ಹರಡುತ್ತದೆ. ಹೀಗಾಗಿ ಹೆಚ್‌ಐವಿ ಸುರಕ್ಷ ಕವಚಗಳನ್ನು ಬಳಸುವುದರಿಂದ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಂದ, ಹೆಚ್‌ಐವಿ ಸೋಂಕನ್ನು ತಡೆಗಟ್ಟಬಹುದಾಗಿದೆ ಎಂದರು.
ಆಗಸ್ಟ್ 12-ಅಂತರಾಷ್ಟ್ರೀಯ ಯುವ ದಿನಾಚರಣೆ ಮತ್ತು ಹೆಚ್‌ಐವಿ ಸೋಂಕಿನ ಜಾಗೃತಿ ಕುರಿತು ಕಾಲೇಜಿನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 121 ಯುನಿಟ್ ರಕ್ತ ಸಂಗ್ರಹಿಸಿಲಾಗಿದೆ. ಇದೇ ವೇಳೆ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಬೈಕ್ ಹೆಲ್ಮೆಟ್ ವಿತರಿಸಲಾಯಿತು.
ಹೆಚ್‌ಐವಿ ಜಾಗೃತಿ ಅಂಗವಾಗಿ ನಗರದ ಶ್ರೀಮೇಧಾ ಪದವಿ ಮಹಾವಿದ್ಯಾಲಯದ ಆವರಣದಿಂದ ಬೈಕ್ ರ‍್ಯಾಲಿಯು ಎಸ್.ಪಿ ಸರ್ಕಲ್, ಕುಮಾರ ಸ್ವಾಮಿ ದೇವಸ್ಥಾನ, ಸುಧಾಕ್ರಾಸ್ ಮೂಲಕ ಹೆಚ್.ಆರ್.ಗವಿಯಪ್ಪ ವೃತ್ತದ ಮಾರ್ಗವಾಗಿ ಮರಳಿ ಶ್ರೀಮೇಧಾ ಪದವಿ ಕಾಲೇಜ್ ಆವರಣಕ್ಕೆ ಬಂದು ಅಂತ್ಯಗೊಂಡಿತು.
ಈ ವೇಳೆ ಶ್ರೀಮೇಧಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ರಾಮ್ ಕಿರಣ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಹನುಮಂತಪ್ಪ, ಡಿಎನ್‌ಓ ಡಾ.ಗಿರೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ ಸೇರಿದಂತೆ ಶ್ರೀಮೇಧಾ ಮಹಾವಿದ್ಯಾಲಯದ ಬೋಧಕ-ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.







