ಬಳ್ಳಾರಿ | ಮುಂಗಾರು ಹಂಗಾಮು ಪ್ರಾರಂಭ ; ರೈತರು ಮಾಗಿ ಉಳುಮೆ ಅನುಸರಿಸಿ : ಸೋಮಸುಂದರ್
ಬಳ್ಳಾರಿ : ಪ್ರಸ್ತಕ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವುದರಿಂದ ರೈತರು ತಮ್ಮ ಜಮೀನಿನಲ್ಲಿ ಮಾಗಿ ಉಳುಮೆ ಮಾಡಿಕೊಂಡು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ತಮ್ಮ ಜಮೀನುಗಳಿಗೆ ಸೇರಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
ಮಾಗಿ ಉಳುಮೆ ಎಂದರೆ ಎಂ.ಬಿ.ನೇಗಿಲು, ಡಿಸ್ಕ್ ಪ್ಲೋ ಅಂತಹ ಯಂತ್ರೋಪಕರಣಗಳನ್ನು ಬಳಸಿ, ಇಳಿಜಾರಿನ ಅಡ್ಡಕ್ಕೆ ಹೊಲವನ್ನು ಆಳವಾದ ಉಳುಮೆ, ಮಣ್ಣಿನ ಹೊರಪದರವನ್ನು ತೆರೆದು ಸೂರ್ಯನ ಕಿರಣಗಳಿಂದ ಸೋಂಕುರಹಿತಗೊಳಿಸಲು ಕೆಳಗಿನ ಮಣ್ಣನ್ನು ತಿರುಗಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾಗಿ ಉಳುಮೆಯಿಂದಾಗುವ ಪ್ರಯೋಜನಗಳು :
ಮಾಗಿ ಉಳುಮೆಯಿಂದ ಮಣ್ಣಿನ ಗಟ್ಟಿಯಾದ ಹೊರಪದರವನ್ನು ಒಡೆದು ಆಳವಾದ ಉಳುಮೆ ಮಾಡುವುದರಿಂದ ನೀರಿನ ಇಂಗುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮಣ್ಣು ಹೆಚ್ಚಿನ ನೀರನ್ನು ಹಿಡಿದುಕೊಂಡು ಸುಲಭವಾಗಿ ಗಿಡಗಳಿಗೆ ದೊರೆಯುವಂತೆ ಮಾಡುತ್ತದೆ.
ಮಾಗಿ ಉಳುಮೆಯಲ್ಲಿ ಪರ್ಯಾಯ ಬಿಸಿಲಿನಿಂದ ಒಣಗಿಸುವಿಕೆ ಹಾಗೂ ಗಾಳಿಯಿಂದ ತಂಪಾಗಿಸುವಿಕೆಯಿಂದಾಗಿ ಮಣ್ಣಿನ ರಚನೆಯು ಸುಧಾರಿಸುತ್ತದೆ. ಮಣ್ಣಿನ ಗಾಳಿಯನ್ನು ಸುಧಾರಿಸುವುದರಿಂದ ಸೂಕ್ಷ್ಮಜೀವಿಗಳ ಉತ್ಪತ್ತಿಯು ಹೆಚ್ಚಾಗಿ ಸಾವಯವ ಗೊಬ್ಬರಗಳು ಕರಗಿ ಪೋಷಕಾಂಶಗಳ ಲಭ್ಯತೆಯು ಹೆಚ್ಚುತ್ತದೆ ಎಂದಿದ್ದಾರೆ.
ಮಾಗಿ ಉಳುಮೆಯಿಂದ ಹೆಚ್ಚಿನ ಮಳೆ ನೀರು ಸಂಗ್ರಹಣೆ, ಪೋಷಕಾಂಶಗಳ ಸಮತೋಲನ ಮತ್ತು ಮಣ್ಣಿನ ಗುಣಧರ್ಮಗಳ ಸುಧಾರಣೆಯಿಂದ ಹೆಚ್ಚಿನ ಬೆಳೆ ಇಳುವರಿ ಪಡೆಯಲು ಸಾಧ್ಯವಾಗುತ್ತದೆ.
ಹಾಗಾಗಿ ರೈತರು ಮಾಗಿ ಉಳುಮೆಯ ಈ ಎಲ್ಲಾ ಪ್ರಯೋಜನೆಗಳಿಂದ ಕಡಿಮೆ ಖರ್ಚು ಮಾಡಿ ಹೆಚ್ಚಿನ ಇಳುವರಿ ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಕೊಳ್ಳಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







