ಬಳ್ಳಾರಿ | ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂಸದ ಇ ತುಕಾರಾಂ

ಬಳ್ಳಾರಿ : ನಗರದ ಪ್ರಮುಖ ಸಮಸ್ಯೆಯಾಗಿರುವ ರಾಷ್ಟ್ರೀಯ ಹೆದ್ದಾರಿ–67 (NH-67) ರಸ್ತೆ ಸಂಚಾರ ದಟ್ಟಣೆ ಮತ್ತು ಮೂಲಭೂತ ಸೌಕರ್ಯ ಕೊರತೆಯನ್ನು ಶಾಶ್ವತವಾಗಿ ಪರಿಹರಿಸಲು ಪ್ರಸ್ತುತ ಎನ್‌ಎಚ್-67 ಬಳ್ಳಾರಿ ಬೈಪಾಸ್‌ನಿಂದ ಸುಧಾಕ್ರಾಸ್ ವರೆಗೆ ಇರುವ ರಸ್ತೆಯನ್ನು ಎರಡು ಲೇನ್‌ನಿಂದ ನಾಲ್ಕು ಲೇನ್‌ಗೆ ಅಭಿವೃದ್ಧಿಪಡಿಸಲು ಸುಮಾರು 90 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸಂಸದ ಇ ತುಕಾರಾಂ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇದಲ್ಲದೆ ಗುಳ್ಯಾಮ್ ಸೇತುವೆ ನಿರ್ಮಾಣಕ್ಕಾಗಿ 60 ಕೋಟಿ ರೂ. ಅನುದಾನ ನೀಡುವಂತೆ ಸಹ ಮನವಿ ಮಾಡಲಾಗಿದೆ.
ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ಎನ್‌ಎಚ್-67 ಬಳ್ಳಾರಿ ಬೈಪಾಸ್‌ನಿಂದ ಸುಧಾಕ್ರಾಸ್ ವರೆಗೆ ಇರುವ ರಸ್ತೆಯನ್ನು ಎರಡು ಲೇನ್‌ನಿಂದ ನಾಲ್ಕು ಲೇನ್‌ಗೆ ಅಭಿವೃದ್ಧಿಪಡಿಸಲು ಶೀಘ್ರದಲ್ಲೇ ಅನುಮೋದನೆ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಗುಳ್ಯಾಮ್ ಸೇತುವೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕೈಗಾರಿಕಾ ಬೆಳವಣಿಗೆ, ರಾಜ್ಯಾಂತರ ಸಂಪರ್ಕ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಈ ರಸ್ತೆ ಅತ್ಯಂತ ಮಹತ್ವದ್ದಾಗಿದ್ದು, ದಿನೇದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.







