ಬಳ್ಳಾರಿ | ಸ್ವ-ಉದ್ಯೋಗದಿಂದ ಸ್ವಾವಲಂಬಿ ಜೀವನ: ಶಿಲ್ಪರಾಣಿ

ಬಳ್ಳಾರಿ, ಫೆ. 2: ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ಆ ಮೂಲಕ ಸ್ವಾವಲಂಬಿಗಳಾಗಿ ಜೀವನ ನಿರ್ವಹಿಸಲು ಸಾಧ್ಯ ಎಂದು ಪಿಡಿಒ ಶಿಲ್ಪರಾಣಿ ಹೇಳಿದರು.
ಸಂಜೀವಿನಿ ಮುದ್ದಾಪುರ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಗ್ರಾಪಂ ಸಹಯೋಗದಲ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಹಳೇ ಪಂಚಾಯತ್‌ನಲ್ಲಿ ಆಯೋಜಿಸಿದ್ದ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಮಾದಕ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀ-ಶಕ್ತಿ ಸೇರಿದಂತೆ ಒಕ್ಕೂಟದ ಮಹಿಳೆಯರು ಸರಕಾರದ ಸಾಲ-ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವ-ಉದ್ಯೋಗ ಕೈಗೊಳ್ಳಬೇಕು. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಒಕ್ಕೂಟದ ಅಧ್ಯಕ್ಷೆ ಶಕುಂತಲಮ್ಮ ಮಾತನಾಡಿ, ಇಂದಿನ ದಿನಮಾನದಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಶಿಕ್ಷಣದೊಂದಿಗೆ ಮತ್ತು ಸ್ವ-ಉದ್ಯೋಗದೊಂದಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದರು.
ಶ್ರೀಗೌರಿ ಮಾತನಾಡಿದರು. ಮಂಜುಳಾ ವಾರ್ಷಿಕ ಸಾಮಾನ್ಯ ಸಭೆಯ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಸುಧಾ, ಸೋಮೇಶ್ವರಿ ಪರಶುರಾಮ, ಜಡೆ ಸಾವಿತ್ರಮ್ಮ ಮಹಾದೇವಪ್ಪ, ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.





