ಬಳ್ಳಾರಿ | ದೇಶದ ಪ್ರಗತಿ ಯುವ ಸಮುದಾಯದ ಕೊಡುಗೆಯ ಮೇಲೆ ಅವಲಂಬಿತ : ಜಯಚಂದ್ರ ರೆಡ್ಡಿ

ಬಳ್ಳಾರಿ, ಜ.12: ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಯು ಅಲ್ಲಿನ ಯುವ ಸಮುದಾಯದ ಕೊಡುಗೆಯನ್ನು ಅವಲಂಬಿಸಿರುತ್ತದೆ ಎಂದು ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಜಯಚಂದ್ರ ರೆಡ್ಡಿ ಅವರು ಅಭಿಪ್ರಾಯಪಟ್ಟರು.
ಭಾರತ ಸರ್ಕಾರದ 'ಮೇರಾ ಯುವ ಭಾರತ' ಹಾಗೂ ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 'ಸ್ವಾಮಿ ವಿವೇಕಾನಂದರ 164ನೇ ಜಯಂತಿ' ಹಾಗೂ 'ರಾಷ್ಟ್ರೀಯ ಯುವ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗಲು ಯುವಶಕ್ತಿ ಬಹಳ ಮುಖ್ಯ. ಯುವ ಸಮೂಹದ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ಇಡೀ ವಿಶ್ವಕ್ಕೆ ಸಾರಿ ಹೇಳಿದವರಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರು. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ತಿಪ್ಪಾರೆಡ್ಡಿ ಮಾತನಾಡಿ, ದೇಶದ ಉನ್ನತಿ ಯುವಕರಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ವಿವೇಕಾನಂದರು, ತಮ್ಮ ಚಿಂತನೆಗಳ ಮೂಲಕ ಯುವಕರನ್ನು ಒಗ್ಗೂಡಿಸಲು ಶ್ರಮಿಸಿದರು. ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆಯಾಗಿರುವ ಅವರ ಜನ್ಮದಿನದ ಸವಿ ನೆನಪಿಗಾಗಿ ಪ್ರತಿವರ್ಷ ಜನವರಿ 12 ರಂದು 'ರಾಷ್ಟ್ರೀಯ ಯುವ ದಿನ'ವನ್ನು ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಐಡಿಪಿಎಸ್ ಕಾಲೇಜಿನ ಶಿವಪ್ರಸಾದ್, ಎ.ಜಿ.ಎಂ ವೆಂಕಟಕೃಷ್ಣ ಸೇರಿದಂತೆ ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.







