ಬಳ್ಳಾರಿ | ಬಟ್ಟೆ ಚೀಲ ಬಳಸಿ, ಪ್ಲಾಸ್ಟಿಕ್ ತ್ಯಜಿಸಿ: ಸಂಡೂರು ಪುರಸಭೆಯಿಂದ ಜಾಗೃತಿ ಅಭಿಯಾನ

ಬಳ್ಳಾರಿ : ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಡೆದು ಪರಿಸರ ಸಂರಕ್ಷಣೆಗೆ ಸಾರ್ವಜನಿಕರು ಕೈಜೋಡಿಸಬೇಕು ಎಂಬ ಉದ್ದೇಶದಿಂದ ಸ್ವಚ್ಛ ಸಂಕಲ್ಪ ಮಾಸದ ಅಂಗವಾಗಿ ಸಂಡೂರು ಪುರಸಭೆ ವತಿಯಿಂದ ಮಾರುಕಟ್ಟೆ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸ್ವಚ್ಛ ಸಂಕಲ್ಪ ಮಾಸದ 3ನೇ ವಾರದ ಸ್ವಚ್ಛ ಪರಿವರ್ತನಾ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ, ಖರೀದಿಗೆ ಬರುವಾಗಲೇ ಬಟ್ಟೆ ಚೀಲಗಳನ್ನು ತಂದ ನಾಗರಿಕರನ್ನು ಅಭಿನಂದಿಸಲಾಯಿತು. ಚೀಲಗಳಿಲ್ಲದೆ ಮಾರುಕಟ್ಟೆಗೆ ಬಂದ ಸಾರ್ವಜನಿಕರಿಗೆ ಬಟ್ಟೆ ಚೀಲಗಳನ್ನು ವಿತರಿಸಿ, ಮುಂದಿನ ದಿನಗಳಲ್ಲಿ ಖರೀದಿಗೆ ಬರುವಾಗ ಕಡ್ಡಾಯವಾಗಿ ಬಟ್ಟೆ ಚೀಲಗಳನ್ನು ತರುವಂತೆ ಮನವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ, ‘ಮಾರುಕಟ್ಟೆಗೆ ಬರುವಾಗ ಬಟ್ಟೆ ಚೀಲಗಳನ್ನು ತರೋಣ’ ಎಂಬ ಸಾಮಾಜಿಕ ಜಾಲತಾಣ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಟ್ಟೆ ಚೀಲಗಳ ಬಳಕೆಯನ್ನು ದೈನಂದಿನ ಜೀವನದ ಅಭ್ಯಾಸವನ್ನಾಗಿ ರೂಢಿಸಿಕೊಳ್ಳುವ ಮೂಲಕ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ಅಭಿಯಂತರರಾದ ಅನ್ನಪೂರ್ಣ, ಆರೋಗ್ಯ ನಿರೀಕ್ಷಕರಾದ ಶಿವರಂಜಿನಿ, ಕಮ್ಯೂನಿಟಿ ಮೊಬಿಲೈಸರ್‌ಗಳಾದ ಕಾವ್ಯಾಂಜಲಿ, ಚೈತ್ರ, ಮಾರೆಕ್ಕ, ದೀನಾ ಮತ್ತು ಅನಿತಾ ಸೇರಿದಂತೆ ಪುರಸಭೆಯ ಆರೋಗ್ಯ ವಿಭಾಗದ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






