ಬಳ್ಳಾರಿ | ವಿವೇಕಾನಂದರು ಇಡೀ ವಿಶ್ವಕ್ಕೆ ಮಾದರಿ: ಪ್ರೊ.ರಾಬರ್ಟ್ ಜೋಸ್

ಬಳ್ಳಾರಿ: 1893ರಲ್ಲಿ ಶಿಕಾಗೋದಲ್ಲಿ ನಡೆದ ಮೊದಲ ವಿಶ್ವಧರ್ಮ ಸಭೆಯಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಿದ್ದ ಸ್ವಾಮಿ ವಿವೇಕಾನಂದರು, ತಮ್ಮ ವಿಚಾರಧಾರೆಗಳ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ರಾಬರ್ಟ್ ಜೋಸ್ ಅಭಿಪ್ರಾಯಪಟ್ಟರು.
ಇಲ್ಲಿನ ವಿಎಸ್‌ಕೆಬಿ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಸೋಮವಾರ ಆಯೋಜಿಸಿದ್ದ '164ನೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ'ಯನ್ನು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರು ಆಧ್ಯಾತ್ಮಿಕತೆ ಮತ್ತು ರಾಷ್ಟ್ರ ನಿರ್ಮಾಣದ ಕುರಿತು ನೀಡಿದ ಬೋಧನೆಗಳು ತಲೆಮಾರುಗಳಿಗೆ ಸ್ಫೂರ್ತಿಯಾಗಿವೆ. ಅವರು ಯಾವುದೇ ಒಂದು ಧರ್ಮ ಅಥವಾ ರಾಷ್ಟ್ರಕ್ಕೆ ಸೀಮಿತವಾಗದೆ, ಕರ್ಮಯೋಗದ ಮೂಲಕ ಮಾನವಕುಲದ ಪ್ರಗತಿಗೆ ಶ್ರಮಿಸಿದರು ಎಂದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪೀರ್ ಬಾಷಾ ಮಾತನಾಡಿ, ವಿವೇಕಾನಂದರು ಭಾರತೀಯ ಸಂಸ್ಕೃತಿಯ ಜಾಗತಿಕ ಪ್ರತೀಕವಾಗಿದ್ದರು. ಅಂದಿನ ಕಾಲದ ಜಾತಿ ಪದ್ಧತಿಯಂತಹ ಪಿಡುಗುಗಳನ್ನು ಅವರು ಎಂದಿಗೂ ಒಪ್ಪಲಿಲ್ಲ. ಅವರ ವೈಚಾರಿಕ ಚಿಂತನೆಗಳು ದೇಶ ವಿದೇಶಗಳಲ್ಲಿ ಇಂದಿಗೂ ಪ್ರಭಾವಶಾಲಿಯಾಗಿವೆ ಎಂದು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಎಂ.ಮುನಿರಾಜು ಮಾತನಾಡಿ, ಯುವಜನತೆ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಸೋಲಿಗೆ ಎದೆಗುಂದದೆ ಸಾಧನೆಯ ಉತ್ಸಾಹವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ವಿಶ್ವವಿದ್ಯಾಲಯದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಕಂಚಿನ ಪ್ರತಿಮೆಗೆ ಆಡಳಿತ ವರ್ಗ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮಾಲಾರ್ಪಣೆ ಮಾಡುವ ಮೂಲಕ ರಾಷ್ಟ್ರೀಯ ಯುವ ದಿನವನ್ನು ಆಚರಿಸಿದರು.
ವೇದಿಕೆಯಲ್ಲಿ ಕುಲಸಚಿವ ಪ್ರೊ. ತಿಪ್ಪೇರುದ್ರಪ್ಪ ಜೆ. ಉಪಸ್ಥಿತರಿದ್ದರು. ಡಾ. ಸಂಪತ್ ಕುಮಾರ್ ಸ್ವಾಗತಿಸಿದರೆ, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಶಿಧರ ಕೆಲ್ಲೂರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.







