ಬಳ್ಳಾರಿ | ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಬಳ್ಳಾರಿ : ಮಾನಸಿಕ ಆರೋಗ್ಯ ಕಾಪಾಡಲು ಪ್ರತಿನಿತ್ಯ ನಮ್ಮ ಕಹಿಗಳನ್ನು ನಮ್ಮ ಮೆದುಳು ಮರೆಸುತ್ತದೆ. ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಸಾಮಾಜಿಕ ಸಂವಹನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಿಳಾ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ, ಧ್ಯಾನ, ಪ್ರಾಣಾಯಾಮದಂತಹ ಚಟುವಟಿಕೆಗಳನ್ನು ಜೀವನಶೈಲಿಯಲ್ಲಿ ಅಳವಡಿಸುವುದು ಮುಖ್ಯ ಎಂದು ಸೂಚಿಸಿದರು. ಅಲ್ಲದೆ, ಮಾನಸಿಕ ಒತ್ತಡ ದೌರ್ಬಲ್ಯವಲ್ಲ. ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಮುಕ್ತವಾಗಿ ಚರ್ಚಿಸುವ ಮೂಲಕ ಒತ್ತಡ ನಿವಾರಣೆ ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್. ಬಸರೆಡ್ಡಿ, ಮತ್ತು ಜಿಲ್ಲಾ ಮಾನಸಿಕ ಮನೋರೋಗ ತಜ್ಞ ಡಾ. ನಂದ ಕಿಶೋರ್ ಅವರು ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯದ ಮಹತ್ವ, ಒತ್ತಡ ನಿಯಂತ್ರಣ, ಮತ್ತು ಮಾನಸಿಕ ಹಾಗೂ ದೈಹಿಕ ಆರೋಗ್ಯದ ನಡುವಿನ ಸಂಬಂಧ ಕುರಿತು ವಿವರಿಸಿದರು. ಅವರು ಉದ್ಯೋಗಸ್ಥಳ ಮತ್ತು ಕುಟುಂಬ ಜೀವನದಲ್ಲಿ ಮೊಬೈಲ್ ಬಳಕೆ ನಿಯಂತ್ರಣ ಮತ್ತು ನಿಯಮಿತ ವಿಶ್ರಾಂತಿ ಕಾಪಾಡುವುದು ಸಹಕಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ವೀರೇಂದ್ರ ಕುಮಾರ್ ಮಾತನಾಡಿ, 25–30 ಪ್ರತಿಶತ ಜನರು ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ವಿಶೇಷವಾಗಿ 15–25 ವಯಸ್ಸಿನವರೆಗೂ ಆತ್ಮಹತ್ಯೆ ಸಂಭವಿಸುತ್ತಿದೆ ಎಂದು ವಿವರಿಸಿದರು.
ಈ ಕುರಿತು 24 ಗಂಟೆ ಕಾರ್ಯ ನಿರ್ವಹಿಸುವ ಟೆಲಿ ಸಹಾಯವಾಣಿ 14416 ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದೂಪಂ ಸತೀಶ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಪೂರ್ಣಿಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಷಿದ್ ಬೇಗಂ, ಸಂಯೋಜಕ ಡಾ. ಸೈಯದಾ.ಕೆ.ತನ್ವೇರ್ ಫಾತಿಮ್, ವಿದ್ಯಾರ್ಥಿಗಳು ಮತ್ತು ಶಿಕ್ಷಣ-ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.







