ಸಂವಿಧಾನದ ಅಡಿಯಲ್ಲೇ ನಿಮಗೆ ಪಾಠ ಕಲಿಸುತ್ತೇವೆ : ಶಾಸಕ ಭರತ್ ರೆಡ್ಡಿಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು

ಬಳ್ಳಾರಿ: ಗಾಲಿ ಜನಾರ್ಧನ ರೆಡ್ಡಿಯವರ ಮನೆ ಸುಟ್ಟು ಭಸ್ಮ ಮಾಡಲು ನನಗೆ ಐದು ನಿಮಿಷ ಸಾಕು ಎಂದು ಹೇಳಿಕೆ ನೀಡಿರುವ ಶಾಸಕ ಭರತ್ ರೆಡ್ಡಿ ಅವರ ಮಾತುಗಳು ಒಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಳ್ಳಾರಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಳ್ಳಾರಿಯಲ್ಲಿ ಎಂತಹ ಭಸ್ಮಾಸುರನಿಗೆ ಜನ್ಮ ನೀಡಿದ್ದೀರಿ? ಜನಾರ್ಧನ ರೆಡ್ಡಿಯವರನ್ನು ಮುಗಿಸಿಬಿಡುವುದಾಗಿ ಹೇಳಲು ನಿಮಗೇನು ಅಷ್ಟು ತಾಕತ್ತಿದೆಯೇ?" ಎಂದು ಸವಾಲು ಹಾಕಿದ ಅವರು, "ನಾವು ಯಾವುದಕ್ಕೂ ಹೆದರುವವರಲ್ಲ. ನಿಮ್ಮಂತೆ ನಾವು ದುಂಡಾವರ್ತಿ ಮಾಡುವುದಿಲ್ಲ, ಬದಲಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲೇ ನಿಮಗೆ ಪಾಠ ಕಲಿಸುತ್ತೇವೆ," ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ಕಿವಿಮಾತು ಹೇಳಿದ ಛಲವಾದಿ, "ಕೋಪ ಮಾಡಿಕೊಂಡು ಮೂಗು ಕೊಯ್ದುಕೊಂಡರೆ ಅದು ಮತ್ತೆ ಬೆಳೆಯುವುದಿಲ್ಲ. ನಿಮ್ಮ ಕೋಪದ ಕೂಸು, ಪಾಪದ ಕೂಸೇ ಇಂದು ನಿಮ್ಮ ಮೇಲೆ ಹಗೆತನ ಸಾಧಿಸುತ್ತಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ನುಡಿದರು





