ಕಂಪ್ಲಿ | ಸ್ತ್ರೀರೋಗ ತಜ್ಞರ ಕೊರತೆಯಿಂದ ಹೆರಿಗೆ ಪ್ರಮಾಣ ಕುಸಿತ : ಬಡ ಗರ್ಭಿಣಿಯರು ಬೇರೆ ನಗರಗಳಿಗೆ ತೆರಳುವ ಪರಿಸ್ಥಿತಿ

ಕಂಪ್ಲಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 20-25 ದಿನಗಳಿಂದ ಶಾಶ್ವತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಿಲ್ಲದೆ ಇರುವುದರಿಂದ ಹೆರಿಗೆ ಪ್ರಮಾಣದಲ್ಲಿ ಗಣನೀಯ ಕುಸಿತ ಉಂಟಾಗಿದೆ.
ಕಳೆದ ಸೆಪ್ಟೆಂಬರ್ 25ರಂದು ಈ ಕೇಂದ್ರದಲ್ಲಿ ನಡೆದ ಹೆರಿಗೆಯ ವೇಳೆ ನವಜಾತ ಶಿಶು ಮತ್ತು ಬಾಣಂತಿಯ ಸಾವಿನ ಪ್ರಕರಣದ ನಂತರ, ಕರ್ತವ್ಯ ಲೋಪದ ಆರೋಪದ ಆಧಾರದ ಮೇಲೆ ಸ್ತ್ರೀರೋಗ ತಜ್ಞರನ್ನು ತುರ್ತು ವರ್ಗಾವಣೆ ಮಾಡಲಾಗಿತ್ತು. ಇದಾದ ಬಳಿಕ ಸುರಕ್ಷಿತ ಹೆರಿಗಾಗಿ ಖ್ಯಾತಿ ಪಡೆದಿದ್ದ ಈ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಕಡಿಮೆಯಾಗಿದೆ.
2024ರ ಜನವರಿಯಲ್ಲಿ “ಲಕ್ಷ್ಯ ರಾಷ್ಟ್ರೀಯ ಪ್ರಶಸ್ತಿ” ಪಡೆದಿದ್ದ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರ ಈಗ ಗರ್ಭಿಣಿಯರ ವಿಶ್ವಾಸ ಕಳೆದುಕೊಂಡಂತಾಗಿದೆ. ವೈದ್ಯರ ಕೊರತೆಯಿಂದಾಗಿ ಗರ್ಭಿಣಿಯರು ಗಂಗಾವತಿ ಹಾಗೂ ಇತರ ಪಟ್ಟಣಗಳ ಆಸ್ಪತ್ರೆಗೆ ತೆರಳುವಂತಾಗಿದೆ.
ಆಸ್ಪತ್ರೆಯ ಅಂಕಿ ಅಂಶಗಳ ಪ್ರಕಾರ, ಎಪ್ರಿಲ್‌ನಲ್ಲಿ 52, ಮೇನಲ್ಲಿ 29, ಜೂನ್‌ನಲ್ಲಿ 41, ಜುಲೈನಲ್ಲಿ 64, ಆಗಸ್ಟ್‌ನಲ್ಲಿ 47 ಹೆರಿಗೆಗಳು ನಡೆದಿದ್ದರೆ, ಸೆಪ್ಟೆಂಬರ್ 30ರಿಂದ ಇಂದಿನವರೆಗೆ ಕೇವಲ 5 ಹೆರಿಗೆಗಳು ಮಾತ್ರ ನಡೆದಿವೆ.
ಅಲ್ಲದೆ ಎಪ್ರಿಲ್‌ನಿಂದ ಆಗಸ್ಟ್ ತನಕ ಟ್ಯೂಬೆಕ್ಟಮಿ 50 ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ 168 ನಡೆದಿದೆ. ಆದರೆ ಸೆಪ್ಟೆಂಬರ್ 29ರಿಂದ 12 ಗರ್ಭಿಣಿಯರನ್ನು ಬೇರೆಡೆಗೆ ಹೆರಿಗೆಗಾಗಿ ಕಳುಹಿಸಲಾಗಿದೆ.
ಸ್ತ್ರೀರೋಗ ತಜ್ಞರ ಕೊರತೆಯಿಂದ ಸಿಬ್ಬಂದಿಯೂ ಹೆರಿಗೆ ಪ್ರಕ್ರಿಯೆ ನಡೆಸಲು ಹೆದರುತ್ತಿದ್ದು, ಇದು ಪಟ್ಟಣದ ಬಡ ಹಾಗೂ ಮಧ್ಯಮ ವರ್ಗದ ಗರ್ಭಿಣಿಯರಿಗೆ ಆರ್ಥಿಕ ಭಾರವಾಗಿ ಪರಿಣಮಿಸಿದೆ.
ವಾರಕ್ಕೆ ಮೂರು ದಿನಗಳಂತೆ ಒಬ್ಬ ಸ್ತ್ರೀರೋಗ ತಜ್ಞರನ್ನು ರೂಪನಗುಡಿಯಿಂದ ಮತ್ತೊಬ್ಬರು ತೋರಣಗಲ್ಲಿನಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆ.25ರಂದು ಹೆರಿಗೆ ಸಂದರ್ಭದಲ್ಲಿ ಆದ ತಾಯಿ ಮಗುವಿನ ಮರಣ ಗಲಾಟೆಯ ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಪ್ರಮಾಣ ಕ್ಷೀಣಿಸಿದೆ. ಗುತ್ತಿಗೆ ಆಧಾರಿತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರನ್ನು ನೇಮಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಡಾ.ವೈ.ರಮೇಶಬಾಬು, ಡಿಎಚ್‌ಒ ಬಳ್ಳಾರಿ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಲು ಹೆದರದಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ದರ್ಜೆಯ ಹೆರಿಗೆ ಸೌಲಭ್ಯಗಳಿವೆ.
ಡಾ.ಜಿ.ಆರುಣ್, ತಾಲ್ಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಕಂಪ್ಲಿ







