ಕಂಪ್ಲಿ | ಅಲೆಮಾರಿ ಕಾಲೋನಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ವೈ.ಶಿವಕುಮಾರ

ಕಂಪ್ಲಿ: ಪಟ್ಟಣದ 22ನೇ ವಾರ್ಡಿನ ಅಲೆಮಾರಿ ಕಾಲೋನಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಾಮಾಜಿಕ ನ್ಯಾಯ ಸಮಿತಿ ವಿಭಾಗದ ರಾಜ್ಯ ಉಪಾಧ್ಯಕ್ಷ ವೈ. ಶಿವಕುಮಾರ ಶನಿವಾರ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಕುಂದುಕೊರತೆಗಳನ್ನು ಆಲಿಸಿದರು.
ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಅಲೆಮಾರಿ ಸಮುದಾಯಕ್ಕೂ ಸರ್ಕಾರದ ಯೋಜನೆಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡಲಾಗುತ್ತಿದೆ ಎಂದರು.
ಈಗಾಗಲೇ ಅಲೆಮಾರಿ ಸಮುದಾಯದ ನಿರ್ಗತಿಕರಿಗೆ 20 ಸಾವಿರ ತಾಡಪಾಲುಗಳನ್ನು ವಿತರಿಸಲಾಗಿದ್ದು, ಅದರಲ್ಲೂ ಜಿಲ್ಲೆಯಲ್ಲಿ 11 ಸಾವಿರ ಕುಟುಂಬಗಳಿಗೆ ನೆರವು ನೀಡಲಾಗಿದೆ. ಅಲೆಮಾರಿ ಸಮುದಾಯಕ್ಕೆ ಶಾಶ್ವತ ನೆಲೆ ಕಲ್ಪಿಸುವ ಉದ್ದೇಶದಿಂದ ನಿವೇಶನ, ಮನೆ, ಜಮೀನು, ತಾಲೂಕು ಮಟ್ಟದಲ್ಲಿ ಸಮುದಾಯ ಭವನ ಹಾಗೂ ಜಿಲ್ಲೆಯಲ್ಲಿ ಪ್ರತ್ಯೇಕ ವಸತಿ ಶಾಲೆ ಸ್ಥಾಪನೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ. ಶಿಕಾರಿ ರಾಮು ಮಾತನಾಡಿ, ಅಲೆಮಾರಿ ಸಮುದಾಯದ ಜೀವನದ ಕಷ್ಟಗಳನ್ನು ಅರಿತ ವ್ಯಕ್ತಿಯಾಗಿ ಶಿವಕುಮಾರ ಸಮಾಜದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅಲೆಮಾರಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಮೀಸಲಿಡಬೇಕು. ಸಮುದಾಯದ ಅಭಿವೃದ್ಧಿಗೆ ಶಾಶ್ವತ ನಿವೇಶನ, ಮನೆ ಮತ್ತು ಜಮೀನು ಒದಗಿಸಬೇಕು. ಜೊತೆಗೆ ಬಳ್ಳಾರಿ ಜಿಲ್ಲೆಯಲ್ಲಿ ಅಲೆಮಾರಿ ಮಕ್ಕಳಿಗಾಗಿ ಪ್ರತ್ಯೇಕ ವಸತಿ ಶಾಲೆ ಹಾಗೂ ಪ್ರತಿ ತಾಲೂಕಿನಲ್ಲಿ ಸಮುದಾಯ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮ್ಯಾದಾರ್ ಸಮಾಜದ ಅಧ್ಯಕ್ಷ ಎಂ.ಗಾಳಿಕುಮಾರ, ತಾಲೂಕು ಸುಡಗಾಡು ಸಿದ್ದರ ಸಮಾಜದ ಅಧ್ಯಕ್ಷ ಸಣ್ಣ ಹುಲುಗಪ್ಪ, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಬಾಬು, ಕರ್ನಾಟಕ ರಾಜ್ಯ ಸಿಂಧೋಳ್ ಸಮಾಜದ ಗೌರವಾಧ್ಯಕ್ಷ ರಾಹುಲ್ ನಾಗಪ್ಪ, ಮುಖಂಡರಾದ ಮಾರೆಪ್ಪ, ಯಲ್ಲಮ್ಮ, ದುರುಗಮ್ಮ, ನಾಗಮ್ಮ, ಕಾವೇರಿ ಸೇರಿದಂತೆ ಅಲೆಮಾರಿ ಸಮಾಜದವರು ಉಪಸ್ಥಿತರಿದ್ದರು.






