ರೈತರಿಗೆ ಮೊದಲ ಹಂತದಲ್ಲಿ 1,250 ಕೋಟಿ ರೂ. ಪರಿಹಾರ ನೀಡಲು ನಿರ್ಧಾರ : ಡಿಸಿಎಂ ಡಾ.ಜಿ.ಪರಮೇಶ್ವರ್
ಬಂಡ್ರಿ ಗ್ರಾಮದಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ ಡಿಸಿಎಂ

ಸಂಡೂರು/ಬಳ್ಳಾರಿ: ತಾಲೂಕಿನ ಬಂಡ್ರಿ ಗ್ರಾಮದ ರೈತರ ಹೊಲಗಳಿಗೆ ಬುಧವಾರ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬರ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ, ಮೆಕ್ಕೆಜೋಳ ಹಾಗೂ ತೊಗರಿ ಬೆಳೆ ಹಾನಿಯನ್ನು ವೀಕ್ಷಿಸಿದರು. ಈ ವೇಳೆ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು.
ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಹಾರಿಸ್ ಸುಮೇರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬಂಡ್ರಿಗೆ ಆಗಮಿಸಿದ ಉಪಮುಖ್ಯಮಂತ್ರಿಗಳು ರೈತರ ಹೊಲಗಳಲ್ಲಿನ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿರುವುದನ್ನು ಗಮನಿಸಿದರು.
ಈ ಸಂದರ್ಭದಲ್ಲಿ ರೈತ ನಾಗರಾಜ್ ಕಂಚಳ್ಳಿ ಮಾತನಾಡಿ, ರೈತರು ಈಗಾಗಲೇ ಸಾಲ ಮಾಡಿ ಬೆಳೆ ಬೆಳೆದಿದ್ದು, ಬ್ಯಾಂಕ್‌ಗಳಿಂದ ಸಾಲ ವಸೂಲಿಗಾಗಿ ಯಾವುದೇ ರೀತಿಯ ತೊಂದರೆ ನೀಡದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಕೊರತೆಯಿಂದ ಜನರು ಗುಳೆ ಹೋಗುವುದನ್ನು ತಡೆಯಲು ವಿಜಿ-ರಾಮ್‌ಜಿ ಯೋಜನೆಯಡಿ ಉದ್ಯೋಗದ ದಿನಗಳನ್ನು ಹೆಚ್ಚಿಸಿ, ಕಾಮಗಾರಿಗಳ ನಿಯಮಗಳಲ್ಲಿ ಅಗತ್ಯ ಸಡಿಲಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಸೇರಿದಂತೆ ಗ್ರಾಮೀಣ ಭಾಗದ ತುರ್ತು ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ರೈತ ಪರಮೇಶಪ್ಪ ಮಾತನಾಡಿ, ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರೈತರು ಪಾವತಿಸಿರುವ ಬೆಳೆ ವಿಮೆಯ ಮೊತ್ತವನ್ನು ನಿಯಮಾನುಸಾರ ಶೀಘ್ರವಾಗಿ ರೈತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕೇಂದ್ರದಿಂದ ನೆರವಿನ ನಿರೀಕ್ಷೆ :
ರೈತರನ್ನುದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ರಾಜ್ಯದಲ್ಲಿ 217 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಬರ ನಿರ್ವಹಣೆಗೆ ಸುಮಾರು 60,000 ಕೋಟಿ ರೂ. ಅಗತ್ಯವಿದೆ. ಈ ಹಿಂದೆ 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ ಸಂದರ್ಭದಲ್ಲಿ ಸುಮಾರು 40,000 ರೂ. ಕೋಟಿ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತನ್ನ ಅಂದಾಜಿನಂತೆ ಸುಮಾರು 10,000 ಕೋಟಿ ರೂ. ಅಗತ್ಯವಿರಬಹುದು ಎಂದು ತಿಳಿಸಿರುವುದಾಗಿ ಹೇಳಿದರು.
ಕೇಂದ್ರದ ಅಧ್ಯಯನ ತಂಡ ತನ್ನ ವರದಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಎಷ್ಟು ಪರಿಹಾರ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.
ಕಳೆದ ಬಾರಿ ಬರ ನಿರ್ವಹಣೆಗಾಗಿ ರಾಜ್ಯ ಸರ್ಕಾರ 18,000 ಕೋಟಿ ರೂ. ಪರಿಹಾರ ಕೇಳಿದ್ದರೂ ಕೇಂದ್ರದಿಂದ ಯಾವುದೇ ನೆರವು ದೊರೆಯಲಿಲ್ಲ. ಬಳಿಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರದಿಂದ ಸುಮಾರು 3,500 ಕೋಟಿ ರೂ. ಪರಿಹಾರ ದೊರೆತಿತ್ತು ಎಂದು ತಿಳಿಸಿದರು.
ರೈತರ ಸಂಕಷ್ಟವನ್ನು ಕಣ್ಣಾರೆ ನೋಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಾವು ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸುತ್ತಿದ್ದೇವೆ. ರೈತರು ಹಾಗೂ ಜಾನುವಾರುಗಳನ್ನು ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು.
ಬ್ಯಾಂಕ್‌ಗಳಿಂದ ರೈತರಿಗೆ ತೊಂದರೆ ನೀಡದಂತೆ ಸೂಚನೆ :
ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ. ಪರಮೇಶ್ವರ್, ಸಾಲ ವಸೂಲಾತಿ ವಿಚಾರದಲ್ಲಿ ರೈತರಿಗೆ ತೊಂದರೆ ನೀಡದಂತೆ ಈಗಾಗಲೇ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. 60 ತಿಂಗಳ ಅವಧಿಗೆ ಸಾಲಗಾರರಿಗೆ ತೊಂದರೆ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರೈತರು ಆತಂಕಕ್ಕೊಳಗಾಗಬಾರದು. ಸದ್ಯಕ್ಕೆ ಬಡ್ಡಿ ಪಾವತಿಸುವ ಬಗ್ಗೆಯೂ ಆತಂಕಪಡಬೇಡಿ. ಮುಂದಿನ ದಿನಗಳಲ್ಲಿ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಿದರೆ ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಈ ವಿಚಾರವನ್ನು ಜವಾಬ್ದಾರಿಯಿಂದ ಪರಿಗಣಿಸಿ ರೈತರ ಪರವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಮೇವಿಗಾಗಿ ಜಿಲ್ಲೆಗೆ 7 ಕೋಟಿ ರೂ. :
ರಾಜ್ಯದಲ್ಲಿ ಜಾನುವಾರುಗಳ ಮೇವಿಗಾಗಿ 25 ಕೋಟಿ ರೂ. ಮೀಸಲಿಡಲಾಗಿದ್ದು, ಬಳ್ಳಾರಿ ಜಿಲ್ಲೆಗೆ ಈಗಾಗಲೇ 7 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತೆರೆಯುವ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯಾದ್ಯಂತ 329 ಕೋಟಿ ರೂ. ಮೀಸಲಿಡಲಾಗಿದ್ದು, ಬಳ್ಳಾರಿ ಜಿಲ್ಲೆಗೆ 7 ಕೋಟಿ ರೂ. ಒದಗಿಸಲಾಗಿದೆ. ಜಿಲ್ಲೆಯ ಅಗತ್ಯಕ್ಕೆ ಅನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
60 ಗ್ರಾಮಗಳಿಗೆ ಕುಡಿಯುವ ನೀರು :
ಸಂಡೂರು ತಾಲೂಕಿನ ಸುಮಾರು 60 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮಾರ್ಚ್ 20ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಡಾ. ಪರಮೇಶ್ವರ್ ತಿಳಿಸಿದರು.
ನಿಡುಗುರ್ತಿ ಮೂಲಕ ಸುಮಾರು 60 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದ್ದು, ಐದು ತಾಲೂಕುಗಳ ಕುಡಿಯುವ ನೀರಿನ ವ್ಯವಸ್ಥೆಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ 2,640 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ರೈತರಿಗೆ ಮೊದಲ ಹಂತದಲ್ಲಿ 1,250 ಕೋಟಿ ರೂ. ಪರಿಹಾರ :
ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ಪ್ರತಿ ರೈತನಿಗೆ 2,500 ರೂ. ರಂತೆ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಮೊದಲ ಹಂತದಲ್ಲಿ 1,250 ಕೋಟಿ ರೂ. ಬಿಡುಗಡೆ ಮಾಡಲು ಆದೇಶಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಮೊತ್ತ ರೈತರ ಖಾತೆಗಳಿಗೆ ಜಮೆಯಾಗಲಿದೆ ಎಂದು ಉಪಮುಖ್ಯಮಂತ್ರಿಗಳು ಭರವಸೆ ನೀಡಿದರು.
ಕೇಂದ್ರದ ಬರ ಪರಿಹಾರದ ನಿಯಮಗಳ ಪ್ರಕಾರ ಒಣಭೂಮಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ 8,000 ರೂ. ಪರಿಹಾರ ನೀಡಬೇಕಾಗುತ್ತದೆ. ಆದರೆ ಕೇಂದ್ರದಿಂದ ಈವರೆಗೆ ಯಾವುದೇ ಮೊತ್ತ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ವತಿಯಿಂದ ಪ್ರತಿ ರೈತನಿಗೆ 2,500 ರೂ. ರಂತೆ ತಾತ್ಕಾಲಿಕ ನೆರವು ನೀಡುತ್ತಿದೆ ಎಂದು ವಿವರಿಸಿದರು.
ಬೆಳೆ ವಿಮೆ ಶೀಘ್ರ ಪಾವತಿಗೆ ಸೂಚನೆ :
ಬೆಳೆ ವಿಮೆ ಕುರಿತು ರೈತರ ಮನವಿಗೆ ಪ್ರತಿಕ್ರಿಯಿಸಿದ ಅವರು, ಯಾವ ಬೆಳೆಗೆ ಎಷ್ಟು ವಿಮಾ ಮೊತ್ತ ನೀಡಬೇಕು ಎಂಬುದು ವಿಮಾ ಕಂಪನಿಗಳ ನಿಯಮ ಹಾಗೂ ಪ್ರಕ್ರಿಯೆಯಂತೆ ನಿರ್ಧಾರವಾಗುತ್ತದೆ. ರೈತರಿಗೆ ಶೀಘ್ರವಾಗಿ ವಿಮಾ ಪರಿಹಾರ ದೊರೆಯುವಂತೆ ಸಂಬಂಧಿಸಿದ ಕಂಪನಿಗಳಿಗೆ ಸೂಚಿಸಲಾಗುವುದು. ಪರಿಹಾರ ನೀಡಲು ವಿಳಂಬ ಮಾಡಿದರೆ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಡೂರು ತಾಲೂಕಿನಲ್ಲಿ ಈಗಾಗಲೇ 8,936 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಅರ್ಹ ರೈತರಿಗೆ ವಿಮಾ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಸಂಡೂರು ತಾಲೂಕಿನ 535 ರೈತರಿಗೆ ಮೆಕ್ಕೆಜೋಳ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಸುಮಾರು 1.50 ಕೋಟಿ ರೂ. ವಿಮಾ ಪರಿಹಾರ ನೀಡಲಾಗುತ್ತಿದೆ ಎಂಬ ವಿಮಾ ಕಂಪನಿಗಳ ಮಾಹಿತಿಯನ್ನೂ ಹಂಚಿಕೊಂಡರು.
ಗುಳೆ ತಪ್ಪಿಸಲು ಉದ್ಯೋಗ ಹೆಚ್ಚಳ :
ರಾಜ್ಯಾದ್ಯಂತ ಬರ ಪರಿಸ್ಥಿತಿ ಇರುವುದರಿಂದ ಜೋಳ, ರಾಗಿ, ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿವೆ. ರೈತರು ಹಾಗೂ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯಲು ಗ್ರಾಮೀಣ ಪ್ರದೇಶದಲ್ಲಿಯೇ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಿಜಿ-ರಾಮ್‌ಜಿ ಯೋಜನೆಯಡಿ ಕೂಲಿ ಕೆಲಸದ ದಿನಗಳನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಉದ್ಯೋಗ ಅರಸಿ ಕಾಫಿ ತೋಟಗಳಿರುವ ಪ್ರದೇಶಗಳಿಗೆ ತೆರಳಲು ಜನರು ಮುಂದಾಗುತ್ತಿದ್ದರೂ, ಈ ಬಾರಿ ಅಲ್ಲಿಯೂ ಮಳೆ ಕೊರತೆಯಿಂದ ಉದ್ಯೋಗದ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಹೇಳಿದರು.
ರೈತರು, ಬಡವರು ಹಾಗೂ ಶ್ರಮಿಕರ ಪರವಾಗಿ ಸರ್ಕಾರ ಇದೆ. ಯಾರೂ ಆತಂಕಕ್ಕೆ ಒಳಗಾಗಬಾರದು. ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಡಾ. ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮಕ್ಕೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿಗಳು ಅಲ್ಲಿನ ತೊಗರಿ ಬೆಳೆ ಹಾನಿಯನ್ನು ಪರಿಶೀಲಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಹ್ಯಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜೆ. ಸೋಮಸುಂದರ್, ಸಂಡೂರು ತಹಶೀಲ್ದಾರ್ ಅನಿಲ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನಬಸಪ್ಪ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹನುಮಪ್ಪ ನಾಯಕ, ಪಶುಸಂಗೋಪನೆ ಇಲಾಖೆಯ ಡಾ. ವಲಿಬಾಷ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಸಹಾಯಕ ನಿರ್ದೇಶಕರಾದ ವಸಂತ್ ರಾಜ್, ಮಹೇಶ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.






