ಕಂಪ್ಲಿ ಕ್ಷೇತ್ರದ ಅಭಿವೃದ್ಧಿ ನನ್ನ ಧ್ಯೇಯ : ಶಾಸಕ ಜೆ.ಎನ್.ಗಣೇಶ್

ಕಂಪ್ಲಿ: ಕ್ಷೇತ್ರದ ಅಭಿವೃದ್ಧಿ ಕಾರ್ಯದ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಹೊರತು ಜನಾರ್ದನರೆಡ್ಡಿ ಅವರ ಹೇಳಿಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಬಳ್ಳಾರಿಯ 22ನೇ ವಾರ್ಡಿನಲ್ಲಿ 2024-25ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯಡಿ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಜೆ.ಎನ್.ಗಣೇಶ್, ಜನಾರ್ದನರೆಡ್ಡಿ ದೊಡ್ಡವರು. ಅವರು ರಾಜ್ಯ ಮತ್ತು ಕೇಂದ್ರದ ನಾಯಕರಾಗಿದ್ದಾರೆ. ಅವರು ಏನಾದರೂ ಮಾತಾಡುತ್ತಾರೆ. ನಾನು ಮಾಧ್ಯಮದಿಂದ ದೂರವಿರುತ್ತೇನೆ. ಇಂತಹ ಸೊಕ್ಕಿನ ಮಾತುಗಳಿಗೆ ಕಿವಿಗೊಡುವುದಿಲ್ಲ. ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಮತದಾರರು ಕೈಹಿಡಿಯಲಿದ್ದಾರೆ ಎಂದು ಹೇಳಿದರು.
ಉತ್ಸವ ಮಾಡಿದರೆ ಕಂಪ್ಲಿ ಮತ್ತು ಕುರುಗೋಡು ಎರಡೂ ಉತ್ಸವಗಳನ್ನು ಮಾಡುತ್ತೇನೆ. ಒಬಿಸಿ ಹಾಸ್ಟೆಲ್ ನಿರ್ಮಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ಆದರೆ, ಈಗ ಕಾಲ ಕೂಡಿ ಬಂದಿದೆ. ಈಗಾಗಲೇ ಕಟ್ಟಡ ನಿರ್ಮಾಣಕ್ಕಾಗಿ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ 3 ಕೋಟಿ ಬರಬೇಕಿದೆ. ಒಟ್ಟಾರೆ 6 ಕೋಟಿ ವೆಚ್ಚದಲ್ಲಿ ಹಾಸ್ಟರ್ ಕಾಮಗಾರಿ ಆರಂಭಗೊಂಡಿದೆ. ಈಗಾಗಲೇ ಎಸ್ಸಿ, ಒಬಿಸಿ, ಅಲ್ಪಸಂಖ್ಯಾತರ ಹಾಸ್ಟೆಲ್ ಆಗಿದೆ. ಮುಂಬರುವ ದಿನಗಳಲ್ಲಿ ಸುಮಾರು 5.50 ಕೋಟಿ ವೆಚ್ಚದಲ್ಲಿ ಎಸ್ಟಿ ಹಾಸ್ಟೆಲ್ ನಿರ್ಮಾಣವಾಗಲಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲಿಂದಲೂ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಈ ಭಾಗದಲ್ಲಿ ರೈತಾಪಿ ಜನರಿದ್ದಾರೆ. ಆದ್ದರಿಂದ ಮಕ್ಕಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಬಿಸಿ ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.
ನಂತರ ಒಬಿಸಿ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ಶಾಸಕ ಗಣೇಶ್ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಇಇ ಚಂದ್ರಕಾಂತ, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ನಿಲಯ ಪಾಲಕರಾದ ಎಂ.ಗಾದಿಲಿಂಗಪ್ಪ, ವಿರುಪಾಕ್ಷಿ, ಮುಖಂಡರಾದ ಕೆ.ಶ್ರೀನಿವಾಸರಾವ್, ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ಎಲ್.ರಾಮನಾಯ್ಡು, ಕರಿಬಸವನಗೌಡ, ಜಾಫರ್, ಹಬೀಬ್ ರೆಹಮಾನ್, ಕೆ.ಷಣ್ಮುಕಪ್ಪ, ನಾಯಕರ ತಿಮ್ಮಪ್ಪ, ಗೋಪಾಲ, ಯಾಳ್ಪಿ ಅಬ್ದುಲ್ ಮುನಾಫ್, ಕರೇಕಲ್ ಮನೋಹರ, ಮೆಹಬೂಬ್, ಡೆಕೋರೇಷನ್ ನಾಗರಾಜ, ಪ್ರಸಾದ್, ಹನುಮಂತಪ್ಪ, ಅಕ್ಕಿ ಜಿಲಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







