ಕಂಪ್ಲಿ ಆಸ್ಪತ್ರೆಗೆ ಡಿಎಚ್‌ಒ ದಿಢೀರ್ ಭೇಟಿ : ಕರ್ತವ್ಯ ಲೋಪವೆಸಗಿದ ವೈದ್ಯರು, ಸಿಬ್ಬಂದಿಗೆ ಶೋಕಾಸ್ ನೋಟಿಸ್

ಕಂಪ್ಲಿ: ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಡಿಎಚ್‌ಒ) ಡಾ. ಅಲಕನಂದಾ ಡಿ. ಮಾಳಗಿ ದಿಢೀರ್ ಭೇಟಿ ನೀಡಿ ಕಡತ ಹಾಗೂ ಸಿಬ್ಬಂದಿ ಕರ್ತವ್ಯದ ಪರಿಶೀಲನೆ ನಡೆಸಿದರು. ಕರ್ತವ್ಯ ಲೋಪ ತೋರಿದ ವೈದ್ಯರು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಶೋಕಾಸ್ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದಾರೆ.
ಶನಿವಾರ ರಾತ್ರಿ ಸ್ಥಳೀಯ ಶಾಸಕರಾದ ಜೆ.ಎನ್. ಗಣೇಶ್ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾಗ ವೈದ್ಯರು ಮತ್ತು ಸಿಬ್ಬಂದಿ ಗೈರುಹಾಜರಾಗಿರುವುದು ಕಂಡುಬಂದಿತ್ತು. ಅಲ್ಲದೆ, ಹಾಜರಾತಿ ಪುಸ್ತಕದಲ್ಲಿ ಮುಂಚಿತವಾಗಿಯೇ ರಜೆ ಹಾಕಿರುವುದು ಮತ್ತು ರೋಗಿಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳನ್ನು ಶಾಸಕರು ಡಿಎಚ್‌ಒ ಅವರ ಗಮನಕ್ಕೆ ತಂದಿದ್ದರು.
ಶಾಸಕರ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಡಿಎಚ್‌ಒ, ಆಸ್ಪತ್ರೆಯ ಹಾಜರಾತಿ ಪುಸ್ತಕ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಶಾಸಕರು ಬಂದಿದ್ದ ಸಮಯದಲ್ಲಿ ಆಯುಷ್ ವೈದ್ಯರು ಊಟಕ್ಕೆ ತೆರಳಿರುವುದು ಸಿಸಿಟಿವಿಯಲ್ಲಿ ದೃಢಪಟ್ಟಿದೆ. ಈ ಕರ್ತವ್ಯ ಲೋಪಕ್ಕಾಗಿ ಆಯುಷ್ ವೈದ್ಯ ಡಾ. ಮಲ್ಲೇಶಪ್ಪ ಅವರಿಗೆ ನೋಟಿಸ್ ನೀಡಲು ಹಾಗೂ ಆಸ್ಪತ್ರೆಯ ಉಳಿದ ವೈದ್ಯರು ಮತ್ತು ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಡಿಎಚ್‌ಒ ಸೂಚಿಸಿದರು.
"ಆಸ್ಪತ್ರೆಗೆ ಬಡ ರೋಗಿಗಳೇ ಹೆಚ್ಚಾಗಿ ಬರುತ್ತಾರೆ. 24/7 ಕರ್ತವ್ಯದಲ್ಲಿರುವ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಯಲ್ಲೇ ಇರಬೇಕು. ಸದ್ಯ ಹೆರಿಗೆ ಹಾಗೂ ಡಯಾಲಿಸಿಸ್ ವಿಭಾಗದಲ್ಲಿ ಉತ್ತಮ ಸೇವೆ ನಡೆಯುತ್ತಿದ್ದರೂ, ಕರ್ತವ್ಯದ ಅವಧಿಯಲ್ಲಿ ಸಿಬ್ಬಂದಿ ಹೊರಗಡೆ ಹೋಗುವಂತಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಬೇಜವಾಬ್ದಾರಿತನ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು," ಎಂದು ಡಿಎಚ್‌ಒ ಡಾ. ಅಲಕನಂದಾ ಎಚ್ಚರಿಸಿದರು.
ಇದೇ ವೇಳೆ, ಶಾಸಕರ ಅಧ್ಯಕ್ಷತೆಯಲ್ಲಿ ಆರು ತಿಂಗಳಿಗೊಮ್ಮೆ ನಡೆಯಬೇಕಾಗಿದ್ದ ಎಕ್ಸಿಕ್ಯೂಟಿವ್ ಹಾಗೂ ಜನರಲ್ ಮೀಟಿಂಗ್‌ಗಳು ಬಾಕಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಟಿಎಚ್‌ಒ ಡಾ. ಅರುಣ್‌ಕುಮಾರ್, ವೈದ್ಯರಾದ ಡಾ. ರವೀಂದ್ರ ಕನಿಕೇರಿ, ಡಾ. ಪ್ರಕಾಶ್ ಗೌಡ ಉಪಸ್ಥಿತರಿದ್ದರು.






