ಊರು ತೊರೆಯದಿರಿ; ವಿಬಿ–ಜಿ ರಾಮ್ ಜಿ ಯೋಜನೆಯಡಿ 125 ದಿನ ಉದ್ಯೋಗ ಪಡೆಯಿರಿ: ವಸಂತ್ ರಾಜ್

ಸಂಡೂರು/ಬಳ್ಳಾರಿ : ಮಳೆಯ ಅಭಾವದಿಂದ ಸಂಡೂರು ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದ್ದು, ಗ್ರಾಮೀಣ ಕೂಲಿಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ವಿಬಿ–ಜಿ ರಾಮ್ ಜಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ನಿರಂತರವಾಗಿ 125 ದಿನಗಳ ಕೂಲಿ ಕೆಲಸ ಒದಗಿಸಲಾಗುವುದು ಎಂದು ಸಹಾಯಕ ನಿರ್ದೇಶಕರು (ಗ್ರಾ.ಉ) ಶ್ರೀ ವಸಂತ್ ರಾಜ್ ತಿಳಿಸಿದರು.
ತಾಲೂಕಿನ ಯು. ರಾಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಬ್ಬಲಗಂಡಿ ಗ್ರಾಮದಲ್ಲಿ ನಡೆಯುತ್ತಿರುವ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ತಾಲೂಕಿನಲ್ಲಿ ಹಮ್ಮಿಕೊಂಡಿರುವ ಜಾಬ್ ಕಾರ್ಡ್ ಮೇಳದ ಕುರಿತು ಗ್ರಾಮಸ್ಥರು ಹಾಗೂ ಕೂಲಿಕಾರ್ಮಿಕರಿಗೆ ಮಾಹಿತಿ ನೀಡಿದರು.
ಮಳೆಯ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಸಮಸ್ಯೆ ಎದುರಾಗದಂತೆ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ. ವಿಬಿ–ಜಿ ರಾಮ್ ಜಿ ಯೋಜನೆಯಡಿ ಅರ್ಹ ಕುಟುಂಬಗಳಿಗೆ 125 ದಿನಗಳವರೆಗೆ ಕೂಲಿ ಕೆಲಸ ದೊರೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೂಲಿಗಾಗಿ ಯಾವುದೇ ಕಾರ್ಮಿಕರು ಗ್ರಾಮ ತೊರೆಯುವ ಅಗತ್ಯವಿಲ್ಲ. ತಮ್ಮ ಸ್ವಗ್ರಾಮದಲ್ಲಿಯೇ ಉಳಿದುಕೊಂಡು ಯೋಜನೆಯಡಿ ಕೆಲಸ ನಿರ್ವಹಿಸುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸದೃಢಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಜಾಬ್ ಕಾರ್ಡ್ ಹೊಂದಿರುವವರು ಹಾಗೂ ಉದ್ಯೋಗದ ಅವಶ್ಯಕತೆ ಇರುವ ಕುಟುಂಬಗಳು ಜಾಬ್ ಕಾರ್ಡ್ ಮೇಳದ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಂಡು ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಪ್ಪ ಮಾಳಿಗಿ, ಐಇಸಿ ಸಂಯೋಜಕ ಯಂಕಪ್ಪ, ಡಿಇಒ ವೈಜುಕುಮಾರ, ಗ್ರಾಮ ಕಾಯಕ ಮಿತ್ರ ಕೆ.ಹೆಚ್. ಹುಲಿಗೆಮ್ಮ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.






