ಉದ್ಯೋಗ ಆಕಾಂಕ್ಷಿಗಳಾಗಬೇಡಿ, ಉದ್ಯೋಗದಾತರಾಗಿ ಬೆಳೆಯಿರಿ: ರಾಜ್ಯಪಾಲೆ ಡಾ. ಸುಧಾ ಯಾದವ್
ವಿಎಸ್ ಕೆ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ, 42 ಸಾಧಕರಿಗೆ 50 ಚಿನ್ನದ ಪದಕ

ಬಳ್ಳಾರಿ: ಕೇವಲ ಉದ್ಯೋಗ ಹುಡುಕುವವರಾಗದೆ, ಸ್ಟಾರ್ಟ್‌ಅಪ್ ಹಾಗೂ ನಾವೀನ್ಯತೆಯ ಮೂಲಕ ಉದ್ಯೋಗದಾತರಾಗಿ ಬೆಳೆಯಬೇಕು ಎಂದು ರಾಜ್ಯಪಾಲೆ ಡಾ.ಸುಧಾ ಯಾದವ್ ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ 2024–25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ 2047ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿ ನಿರ್ಮಿಸುವ ಮಹಾಸಂಕಲ್ಪದಲ್ಲಿ ಯುವಜನತೆ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 42 ಕೋಟಿ ಅನುದಾನದಲ್ಲಿ ವಿವಿಯ ಡಿಜಿಟಲ್ ಮೂಲಸೌಕರ್ಯ ವಿಸ್ತರಣೆಯಾಗುತ್ತಿದೆ. ತೃತೀಯ ಲಿಂಗಿಗಳು ಹಾಗೂ ಪೌರಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ನೀಡುವ ಮೂಲಕ ವಿವಿಯು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಶಾ ಮುಕ್ತ ಭಾರತದ ಧ್ವಜವಾಹಕರಾಗುವುದು, ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ನಿರಂತರ ಕಲಿಕೆ ರೂಢಿಸಿಕೊಳ್ಳುವುದು ಹಾಗೂ ‘ಒಂದು ಮರ–ತಾಯಿ’ ಭಾವನೆಯೊಂದಿಗೆ ಪರಿಸರ ಸಂರಕ್ಷಣೆ, ಸ್ವಚ್ಛತೆಯನ್ನು ಜೀವನಶೈಲಿಯಾಗಿಸಿಕೊಳ್ಳಬೇಕು ಎಂದರು.
ಘಟಿಕೋತ್ಸವದಲ್ಲಿ ಕರ್ನಾಟಕ ಮತ್ತು ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ.ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ಪ್ರತಿವರ್ಷ ಸುಮಾರು ಆರು ಲಕ್ಷ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುತ್ತಿರುವುದು ನೋವಿನ ಸಂಗತಿ. ತಾಯ್ನಾಡಿನ ಋಣ ತೀರಿಸುವ ಮನೋಭಾವ ಬೆಳೆಯಬೇಕು. ಕೃತಕ ಬುದ್ಧಿಮತ್ತೆ (ಎಐ) ಮಾನವನ ಸೇವೆ ಮಾಡುವ ಸಾಧನವಾಗಬೇಕೇ ಹೊರತು, ಮನುಷ್ಯನೇ ಎಐಗೆ ಸೇವಕನಾಗಬಾರದು. ಶಿಕ್ಷಣವು ಕೇವಲ ಮಾಹಿತಿಯಾಗದೆ, ಸಮಾಜದ ಒಳಿತಿಗೆ ಬಳಸುವ ವಿವೇಕವಾಗಬೇಕು ಎಂದು ಎಚ್ಚರಿಸಿದರು.
ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ,17ನೇ ವರ್ಷಕ್ಕೆ ಕಾಲಿಟ್ಟಿರುವ ವಿವಿಗೆ ಯುಎನ್ ಇಕೋ ಸೊಸೈಟಿಯ ಗ್ಲೋಬಲ್ ಗ್ರೀನ್ ಯೂನಿವರ್ಸಿಟಿ ಅವಾರ್ಡ್–2026 ಲಭಿಸಿದೆ. 30ಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದಿದ್ದು, 22 ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಶಿಕ್ಷಣ ಮತ್ತು ಸಮಾಜಸೇವೆಗಾಗಿ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಡಾ.ಹೆನ್ರಿ ಡಿಸೋಜಾ, ಸಾಹಿತ್ಯ–ಪರಿಸರ ಸೇವೆಗಾಗಿ ಚನ್ನಬಸವಣ್ಣ ಸಿ. (‘ಲೋಹಿಯಾ ಚನ್ನಬಸವಣ್ಣ’) ಹಾಗೂ ಶಿಕ್ಷಣ, ಕಲೆ ಮತ್ತು ಸಮಾಜಸೇವೆಗಾಗಿ ಕೃಪಾನಿಧಿ ಶಿಕ್ಷಣ ಸಂಸ್ಥೆಗಳ ಸಹಸಂಸ್ಥಾಪಕಿ ಗೀತಾ ನಾಗಪಾಲ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ 52 ಸಂಶೋಧನಾರ್ಥಿಗಳಿಗೆ ಪಿಎಚ್.ಡಿ ಹಾಗೂ 137 ವಿದ್ಯಾರ್ಥಿಗಳಿಗೆ (ಸ್ನಾತಕ 66, ಸ್ನಾತಕೋತ್ತರ 71) ರ‍್ಯಾಂಕ್ ಪ್ರಮಾಣಪತ್ರ ವಿತರಿಸಲಾಯಿತು. 42 ವಿದ್ಯಾರ್ಥಿಗಳು ಒಟ್ಟು 50 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಪ್ರೊ.ವಿ.ಲೋಕೇಶ್, ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಕಣ್ಣನ್, ವಿವಿಧ ನಿಕಾಯಗಳ ಡೀನ್‌ಗಳೂ, ಪ್ರಾಂಶುಪಾಲರು ಹಾಗೂ ಬೋಧಕ–ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.






