ಬಳ್ಳಾರಿ ವಲಯದ ನೂತನ ಐಜಿಪಿಯಾಗಿ ಡಾ.ಪಿ.ಎಸ್.ಹರ್ಷ ಅಧಿಕಾರ ಸ್ವೀಕಾರ

ಬಳ್ಳಾರಿ : ಬಳ್ಳಾರಿ ವಲಯದ ನೂತನ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಡಾ.ಪಿ.ಎಸ್.ಹರ್ಷ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಬುಧವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕಾರದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನುಬದ್ಧ, ನಿಷ್ಪಕ್ಷಪಾತ ಹಾಗೂ ದೃಢವಾದ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಬಳ್ಳಾರಿ ವಲಯದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಪ್ರಮುಖ ಹಾಗೂ ಶಾಂತಿಪ್ರಿಯ ಜಿಲ್ಲೆಗಳಾಗಿದ್ದು, ಈ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ, ಜನಸ್ನೇಹಿ ಪೊಲೀಸ್ ಆಡಳಿತ ನೀಡಲು ಪೊಲೀಸ್ ಇಲಾಖೆ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.
ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದ ಬೆನ್ನಲ್ಲೇ ಪೊಲೀಸ್ ಐಜಿ ವರ್ತಿಕಾ ಕಟಿಯಾರ್ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿತ್ತು. ಇತ್ತೀಚೆಗೆ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೇ, ಬಳ್ಳಾರಿ ವಲಯಕ್ಕೆ ನೂತನ ಐಜಿ ಆಗಿ ಪಿಎಸ್ ಹರ್ಷ ಹಾಗೂ ನೂತನ ಎಸ್ಪಿ ಆಗಿ ಡಾ.ಸುಮನ್ ಡಿ ಪೆನ್ನೇಕರ್ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.







